National

ಚುನಾವಣಾ ವೆಚ್ಚದ ಮಿತಿ ಹೆಚ್ಚಿಸಿದ ಕೇಂದ್ರ ಚುನಾವಣಾ ಆಯೋಗ

ನವದೆಹಲಿ: ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವವರು ಇಂತಿಷ್ಟೇ ಹಣವನ್ನು ಖರ್ಚು ಮಾಡಬೇಕೆಂಬ ನಿಯಮವಿದೆ. ಹಲವು ದಶಕಗಳಿಂದ ಅದರ ಮಿತಿ ಏರಿಕೆ ಮಾಡಿರಲಿಲ್ಲ. ಇದೀಗ ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಖರ್ಚು ಮಾಡಬೇಕಿರುವ ಮಿತಿಯನ್ನು ಏರಿಕೆ ಮಾಡಿದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವವರು ಈ ಹಿಂದೆ 70 ಲಕ್ಷ ರೂಪಾಯಿ ಒಳಗೆ ಖರ್ಚು ಮಾಡಬೇಕಿತ್ತು. ಆದ್ರೆ ಇದೀಗ ಆ ಮಿತಿಯನ್ನು 90ಲಕ್ಷ ರೂಪಾಯಿಗೆ ಏರಿಸಲಾಗಿದೆ. ಇನ್ನು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವವರು, ಈ ಹಿಂದೆ 28 ಲಕ್ಷ ರೂಪಾಯಿ ಖರ್ಚು ಮಾಡಬಹುದಿತ್ತು. ಆದ್ರೆ ಇದೀಗ ಅದರ ಮಿತಿಯನ್ನು 40 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಕುರಿತ ಅಧ್ಯಯನಕ್ಕಾಗಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಈ ಸಮಿತಿ ನೀಡಿದ ವರದಿ ಪ್ರಕಾರ, 2014ರಿಂದ ಮತದಾರರ ಸಂಖ್ಯೆ ಏರಿಕೆಯಾಗಿದೆ. ಜೊತೆಗೆ ವೆಚ್ಚ ಹಣದುಬ್ಬರದಲ್ಲೂ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ವೆಚ್ಚದ ಮಿತಿಯನ್ನು ಏರಿಕೆ ಮಾಡಬೇಕೆಂದು ಸಮಿತಿ ಸೂಚನೆ ನೀಡಿತ್ತು. ಇದರ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೆಚ್ಚದ ಮಿತಿಯನ್ನು ಏರಿಕೆ ಮಾಡಿದೆ.

Share Post