ವಾಮಾಚಾರಕ್ಕೆ ಸ್ನೇಹಿತನನ್ನೇ ಕೊಂದ ಅಪ್ರಾಪ್ತ ಬಾಲಕರು..!
ಮೈಸೂರು: ವಾಮಾಚಾರಕ್ಕಾಗಿ ಧನುರ್ ಮಾಸದ ಅಮಾವಾಸ್ಯೆ ದಿನ ಬಾಲಕನೊಬ್ಬನನ್ನು ಬಲಿಕೊಟ್ಟಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಬಳಿ ನಡೆದಿದೆ. ಇಲ್ಲಿನ ಹೆಮ್ಮರಗಾಲ ಗ್ರಾಮದ ಸಿದ್ದರಾಜು ಅವರ ಪುತ್ರ ಹದಿನಾರು ವರ್ಷದ ಮಹೇಶ್ ಎಂನಾತನೇ ವಾಮಾಚಾರಕ್ಕೆ ಬಲಿಯಾದ ಬಾಲಕ.
ಧನುರ್ ಮಾಸದ ಅಮಾವಾಸ್ಯೆ ದಿನದಂದು ನರಬಲಿ ಕೊಟ್ಟರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ನಂಬಿದ್ದ ಮಹೇಶ್‌ನ ಮೂವರು ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ. ಅಮಾವಾಸ್ಯೆ ದಿನ ಹೆಮ್ಮರಗಾಲಕ್ಕೆ ಸಮೀಪದ ಹಳೇಪುರ ಗ್ರಾಮಕ್ಕೆ ಮಹೇಶ್‌ನನ್ನು ಕರೆದೊಯ್ದಿದ್ದಾರೆ. ಅಲ್ಲಿ ಮಧ್ಯಾಹ್ನದ ಹೊತ್ತಿನಲ್ಲೇ ಒಂದು ಗೊಂಬೆಯನ್ನಿಟ್ಟು ಪೂಜೆ ಮಾಡಿದ್ದಾರೆ. ಆ ಗೊಂಬೆ ಮೇಲೆ ಮಹೇಶ್ ಎಂದು ಬರೆದಿದ್ದಾರೆ. ಅನಂತರ ಮಹೇಶ್‌ನನ್ನು ಕರೆಗೆ ತಳ್ಳಿ ಕೊಲೆ ಮಾಡಿದ್ದಾರೆ. ಅನಂತರ ಆರೋಪಿಗಳಲ್ಲೊಬ್ಬ ಮಹೇಶ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಊರಿನವರಿಗೆ ಸುದ್ದಿ ಮುಟ್ಟಿಸಿದ್ದಾನೆ.
ಮಹೇಶ್‌ನ ಊರಿನವರು ಬಂದು ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮಹೇಶ್ ಮೃತದೇಹ ಪತ್ತೆಯಾಗಿದೆ. ಇದೇ ವೇಳೆ ಕೆರೆಯ ಆವರಣದಲ್ಲಿ ವಾಮಾಚಾರ ನಡೆದಿರುವುದು ಪತ್ತೆಯಾಗಿದೆ. ಜೊತೆಗೆ ಗೊಂಬೆ ಮೇಲೆ ಮಹೇಶ್ ಎಂದು ಬರೆದಿರುವುದು ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಮಹೇಶ್ ಪೋಷಕರು, ಮಹೇಶ್ ಸ್ನೇಹಿತರನ್ನು ಹಿಡಿದು ಪ್ರಶ್ನೆ ಮಾಡಿದಾಗ, ವಾಮಾಚಾರಕ್ಕಾಗಿ ಮಹೇಶ್‌ನನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.
ಆರೋಪಿಗಳಲ್ಲಿ ಒಬ್ಬ ತನ್ನ ತಾತನಿಂದ ಚಿಕ್ಕ ವಯಸ್ಸಿನಲ್ಲೇ ವಾಮಾಚಾರ ಕಲಿತಿದ್ದನಂತೆ. ಅದನ್ನು ಪ್ರಯೋಗ ಮಾಡಲು ಹೋಗಿ ಈಗ ಸಿಕ್ಕಿಬಿದ್ದಿದ್ದಾನೆ. ಆತ್ಮೀಯನನ್ನೇ ಕೊಲೆ ಮಾಡಿದ್ದಾನೆ. ಆರೋಪಿಗಳು ಮೂವರೂ ಪೊಲೀಸರ ವಶದಲ್ಲಿದ್ದು, ಎಲ್ಲರೂ ಅಪ್ರಾಪ್ತರೆಂದು ತಿಳಿದುಬಂದಿದೆ.