Districts

ಪುಟ್ಟ ಕೋಳಿ ಮರಿಗೆ ಟಿಕೆಟ್‌: ಪ್ರಯಾಣಿಕರಿಗೆ ವಿಚಿತ್ರ ಅನುಭವ

ಶಿವಮೊಗ್ಗ: ಸಾಮಾನ್ಯವಾಗಿ ಬಸ್‌, ರೈಲು, ವಿಮಾನಗಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಸರಕು-ಸರಂಜಾಮಿದ್ದರೆ ಲಗೇಜ್‌ ಚಾರ್ಜ್‌ ವಿಧಿಸುವುದು ಕಾಮನ್‌, ಅಥವಾ ಹತ್ತು ವರ್ಷಕ್ಕಿಂತ ಮೇಲ್ಪಟ್ಟು ವಯಸ್ಸಿನ ಮಕ್ಕಳಿದ್ರೆ ಹಾಫ್‌ ಟಿಕೇಟ್‌ ಎಂದು ಪರಿಗಣಿಸುವುದು ತಿಳಿದಿರುವ ವಿಷಯ. ಆದ್ರೆ ಈ ಸರ್ಕಾರಿ ಬಸ್‌ನಲ್ಲಿ ನಡೆದಿರುವ ಘಟನೆ ನೋಡಿದ್ರೆ ವಿಚಿತ್ರ ಅನಿಸಿದ್ರೂ ಸತ್ಯ. ಅಲ್ಲಿದ್ದ ಪ್ರಯಾಣಿಕರು ಮೇಲೆ -ಕೆಳಗೆ ಕಣ್ಣುಬಿಡುವಂತಾಗಿದ್ದೂ ಕೂಡ ಸತ್ಯ.

ಅಷ್ಟಕ್ಕೂ ಆಗಿದ್ದೇನಪ್ಪಾ ಅಂದ್ರೆ…

ತಮ್ಮ ಹೊಟ್ಟೆಪಾಡಿಗಾಗಿ ಊರೂರು ಅಲೆದು ಬದುಕು ಜೀವಿಸುವ ಬಡ ಅಲೆಮಾರಿ ಕುಟುಂಬವೊಂದು ಸಿದ್ದಾಪುರದಿಂದ ಶೀರೂರಿಗೆ ಹೊರಡಲು ಶಿವಮೊಗ್ಗ  ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ಕರಾರಸಾನಿ ಬಸ್‌ ಹತ್ತಿದ್ದಾರೆ. ಟಿಕೆಟ್‌ ನೀಡಲು ಬಂದ ಕಂಡಕ್ಟರ್‌ ದಂಪತಿಗೆ ಬಳಿ ಹಣ ಪಡೆದು ಎರಡು ಟಿಕೆಟ್‌ ನೀಡಿದ್ದಾನೆ. ಈ ವೇಳೆ ಅವರ ಬಳಿಯಿದ್ದ ಚೀಲದಿಂದ ಕೋಳಿಮರಿ ಚಿಂವ್‌..ಚಿಂವ್‌ ಎಂದು ಶಬ್ದ ಮಾಡಿದೆ. ಅಷ್ಟಕ್ಕೇ ಕಂಡಕ್ಟರ್‌ ಏನದು ತೋರಿಸಿ ಎಂದು ಕೋಳಿಮರಿ ನೋಡಿದ ಕೂಡಲೇ ಅದಕ್ಕೂ ಅರ್ಧ ಟಿಕೆಟ್‌ ಚಾರ್ಜ್‌ ಮಾಡಿದ್ದಾರೆ. ಕಂಡಕ್ಟರ್‌ ವರ್ತನೆಗೆ ಪ್ರಯಾಣಿಕರಿಗೆ ವಿಚಿತ್ರ ಅನುಭವ ಆಗಿದೆ. ಕೋಳಿಮರಿಗೆ ಎಲ್ಲಾದ್ರೂ ಚಾರ್ಜ್‌ ಮಾಡುವುದುಂಟೇ ಶಿವಾ..ಎಂದುಕೊಂಡು ಜೇಬಿನಿಂದ 52ರೂಪಾಯಿ ಕೊಟ್ಟು ಟಿಕೆಟ್‌ ಪಡೆದಿದ್ದಾರೆ ದಂಪತಿ.. ಅಲ್ಲಾ ಸರ್‌ ನಾವು ಈ ಕೋಳಿಗೆ ಹತ್ತು ರೂಪಾಯಿ ಕೊಟ್ಟು ಕೊಂಡುಕೊಂಡಿದ್ದೇವೆ ಇವರು ನೋಡಿದ್ರೆ ಇಷ್ಟೊಂದು ಬಸ್‌ ಚಾರ್ಜ್ ಕೇಳ್ತಾರಲ್ಲ ಅಂತ ನಸುನಕ್ಕು ದಂಪತಿ ಹೇಳಿದ್ದಾರೆ. ಬಸ್‌ನಲ್ಲಿದ್ದವರು  ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಇದನ್ನು ಹರಿಬಿಟ್ಟಿದ್ದಾರೆ.

Share Post