Politics

ಅಧಿಕಾರಕ್ಕೆ ಬಂದ್ರೆ 50 ರೂ.ಗೊಂದು ಮದ್ಯದ ಬಾಟಲಿ; ಆಂಧ್ರದಲ್ಲಿ ಬಿಜೆಪಿ ಆಫರ್‌

ಅಮರಾವತಿ: ಆಂಧ್ರಪ್ರದೇಶದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ, ಮದ್ಯದ ಬಾಟಲಿಯನ್ನು 50 ರೂಪಾಯಿಗೆ ನೀಡೋದಾಗಿ ಬಿಜೆಪಿ ಭರವಸೆ ನೀಡಿದೆ. ವಿಜಯವಾಡದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಇಂತಹದ್ದೊಂದು ಆಫರ್‌ ಕೊಟ್ಟು, ವಿಮರ್ಶೆಗೀಡಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ಈಗಿನ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರ, ಮದ್ಯ ಸೇವನೆಯನ್ನು ನಿಯಂತ್ರಣ ಮಾಡುವುದಕ್ಕಾಗಿ ಮದ್ಯದ ಬೆಲೆಯನ್ನು ಶೇಕಡಾ 75ರಷ್ಟು ಏರಿಕೆ ಮಾಡಿತ್ತು. ಆದ್ರೆ ಇತ್ತೀಚೆಗೆ ಆ ಬೆಲೆಯಲ್ಲಿ ಶೇ.15 ರಿಂದ 20ರಷ್ಟು ಇಳಿಸಲು ಆಂಧ್ರ ಸರ್ಕಾರ ತೀರ್ಮಾನ ಮಾಡಿದೆ.  ಈ ಬೆನ್ನಲ್ಲೇ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಅವರು, ಆಂಧ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ಬಾಟಲಿ ಬೆಲೆ 75 ರೂಪಾಯಿಗೆ ಇಳಿಸುತ್ತೇವೆ. ಸರ್ಕಾರಕ್ಕೆ ಆದಾಯ ಹೆಚ್ಚಾದರೆ ಅದನ್ನು 50 ರೂಪಾಯಿಗೆ ಬೇಕಾದರೂ ಇಳಿಸುತ್ತೇವೆ ಎಂದು ಹೇಳಿದ್ದಾರೆ.

ಒಬ್ಬ ವ್ಯಕ್ತಿ ತಿಂಗಳಿಗೆ ಸರಾಸರಿ 12,000 ರೂಪಾಯಿಯಷ್ಟು ಮದ್ಯ ಸೇವನೆ ಮಾಡುತ್ತಾನೆ. ಆ ಎಲ್ಲ ಹಣವನ್ನು ಸಿಎಂ ಜಗನ್‌ ಮೋಹನ್‌ ರೆಡ್ಡಿ ಸಂಗ್ರಹಿಸಿ, ಯೋಜನೆಗಳ ರೂಪದಲ್ಲಿ ಜನರಿಗೆ ಮರಳಿಸಿ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಸೋಮು ವೀರರಾಜು ಹೇಳಿದ್ದಾರೆ. ಅಂದಹಾಗೆ, 2024ಕ್ಕೆ ಆಂಧ್ರಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಹತ್ತಿರವಾಗುತ್ತಿರುವುದರಿಂದ ರಾಜಕಾರಣಿಗಳು ನಾನಾ ಆಶ್ವಾಸನೆಗಳು ನೀಡುತ್ತಾರೆ. ಆದ್ರೆ ಆಂಧ್ರ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು, ಮದ್ಯವನ್ನು ಕಡಿಮೆ ಬೆಲೆಗೆ ನೀಡುವುದಾಗಿ ಹೇಳಿ, ಮದ್ಯ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 

Share Post