Politics

2015ರಲ್ಲೇ ಮತಾಂತರ ಕಾಯ್ದೆ ಕರಡು; ಸಹಿ ಹಾಕಿರುವುದು ಒಪ್ಪಿಕೊಂಡ ಸಿದ್ದರಾಮಯ್ಯ

ಬೆಳಗಾವಿ: ೨೦೧೫ರಲ್ಲಿ ಕಾನೂನು ಆಯೋಗ ಮತಾಂತರ ನಿಷೇಧ ಕಾಯ್ದೆಯ ಕರಡನ್ನು ಸಿದ್ಧಪಡಿಸಿತ್ತು. ಆ ಕಡತ ನನ್ನ ಮುಂದೆ ಬಂದಿದ್ದು, ೨೦೧೫ರ ನವೆಂಬರ್‌ ೧೧ರಂದು ಸಚಿವ ಸಂಪುಟದ ಮುಂದೆ ತರುವುದು ಎಂದು ಷರಾ ಬರೆದು ಸಹಿ ಹಾಕಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಾನು ಡಿಕ್ಟೇಟರ್‌ ಅಲ್ಲ, ಸಚಿವ ಸಂಪಟದ ಒಪ್ಪಿಗೆ ಪಡೆದರೆ ಮಾತ್ರ ಯಾವುದೇ ಬಿಲ್‌ ಪಾಸ್‌ ಮಾಡಲು ಸಾಧ್ಯ. ನಾನು ಸಹಿ ಹಾಕಿದ ನಂತರವೂ ನಾನು ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿದ್ದೆ. ಆದರೆ ಕಡತಕ್ಕೆ ಸಹಿ ಹಾಕಿದ್ದು, ಬಿಟ್ಟರೆ ಆ ಬಗ್ಗೆ ಎಂದೂ ಚರ್ಚೆ ಆಗಿಲ್ಲ. ಸಚಿವ ಸಂಪುಟದ ಮುಂದೆಯೂ ಬರಲಿಲ್ಲ. ನಾನು ಆ ಬಿಲ್‌ ಪಾಸ್‌ ಮಾಡಬೇಕು ಅಂತಿದ್ದರೆ ಒಂದು ಸೆಕೆಂಡ್‌ನಲ್ಲಿ ಪಾಸ್‌ ಮಾಡಿಸುತ್ತಿದ್ದೆ. ಆದರೆ ನಾವು ಆ ಬಗ್ಗೆ ಯೋಚನೆ ಮಾಡಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಮಜಾಯಿಷಿ ಕೊಟ್ಟಿದ್ದಾರೆ.

ಅಂದು ಮತಾಂತರ ನಿಷೇಧ ಕಾಯ್ದೆಯ ಕರಡು ಸಿದ್ಧವಾಗಿತ್ತು ನಿಜ. ಆದರೆ ಅಂದಿನ ಬಿಲ್‌ನಲ್ಲಿರುವ ವಿಚಾರಗಳಿಗೂ, ಇಂದು ಬಿಜೆಪಿ ಜಾರಿಗೆ ತರುತ್ತಿರುವ ಬಿಲ್ ನಲ್ಲಿರುವ ವಿಚಾರಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು. ಬೆಳಗ್ಗೆ ಕಲಾಪ ಶುರುವಾದಾಗ ಮತಾಂತರ ನಿಷೇಧ ಕಾಯ್ದೆ ವಿರುದ್ಧ ಕಾಂಗ್ರೆಸ್‌ ಹಾಗೂ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಈ ವೇಳೆ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರವಿದ್ದಾಗಲೇ ಮತಾಂತರ ನಿಷೇಧ ಕಾಯ್ದೆ ತರಲು ತೀರ್ಮಾನಿಸಲಾಗಿತ್ತು. ಅದಕ್ಕೆ ಕರಡು ಕೂಡಾ ಸಿದ್ಧವಾಗಿತ್ತು. ಸಿದ್ದರಾಮಯ್ಯ ಅವರೇ ಕರಡಿಗೆ ಸಹಿ ಹಾಕಿದ್ದಾರೆ ಎಂದು ಹೇಳಿದರು. ಇದ್ರಿಂದಾಗಿ ಸದನದಲ್ಲಿ ಕೋಲಾಹಲ ಉಂಟಾಗಿತ್ತು. ಅದಾದ ನಂತರ ಸ್ಪೀಕರ್‌ ಕಚೇರಿಯಲ್ಲಿ ದಾಖಲೆ ಪರಿಶೀಲಿಸಿದಾಗ ಸಿದ್ದರಾಮಯ್ಯ ಅವರು ಸಹಿ ಹಾಕಿರುವುದು ಪತ್ತೆಯಾಗಿತ್ತು. ಅನಂತರ ಸಿದ್ದರಾಮಯ್ಯ ಅವರು ಸದನದಲ್ಲಿ ತಮ್ಮನ್ನು ಸಮರ್ಥಿಸಿಕೊಂಡರು.

 

Share Post