ಬಿಎಂಎಸ್ ಟ್ರಸ್ಟ್ ವಿವಾದ; ಸದನಲ್ಲಿ ಜೆಡಿಎಸ್ ಪ್ರತಿಭಟನೆ
ಬೆಂಗಳೂರು; ನಿನ್ನೆ ವಿಧಾನಸಭೆಯಲ್ಲಿ ಬಿಎಂಎಸ್ ಟ್ರಸ್ಟ್ ವಿವಾದ ದೊಡ್ಡ ಸದ್ದು ಮಾಡಿತ್ತು. ಇವತ್ತೂ ಕೂಡಾ ದರ ಬಿಸಿ ತಣ್ಣಗಾಗಿಲ್ಲ. ಕಲಾಪ ಶುರುವಾಗುತ್ತಿದ್ದಂತೆ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿ ಜೆಡಿಎಸ್ ಸದಸ್ಯರು ಧರಣಿ ನಡೆಸಿದರು.
ಇತ್ತ ವಿವಾದದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಬಿಎಂಎಸ್ ಟ್ರಸ್ಟ್‌ನ ಮೂಲ ಡೀಡ್ ಉಲ್ಲೇಖಿಸಿ ಆಡಳಿತಾರೂಢ ಬಿಜೆಪಿ ಸರ್ಕಾರ ಹಾಗೂ ಸಚಿವ ಅಶ್ವತ್ಥ ನಾರಾಯಣಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಬಿಎಂಎಸ್ ಟ್ರಸ್ಟ್ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಟ್ರಸ್ಟ್ ಮತ್ತು ಆ ಟ್ರಸ್ಟ್‌ನ ಎಲ್ಲ ಸ್ವತ್ತುಗಳನ್ನು ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಎಚ್ಡಿಕೆ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲೇ ಎಲ್ಲವನ್ನೂ ದಾಖಲೆ ಸಮೇತ ಇಟ್ಟಿದ್ದೇನೆ. ಆ ದಾಖಲೆಗಳೇ ಎಲ್ಲವನ್ನೂ ಮಾತನಾಡುತ್ತಿವೆ. ಇನ್ನು ನನ್ನ ಹೊಡೆದ ಗುಂಡು ಎಲ್ಲಿ ವಿಫಲವಾಗಿದೆ? ಅದನ್ನು ವಿಫಲಗೊಳಿಸುವ ಇನ್ನೊಂದು ಹುನ್ನಾರ, ಷಡ್ಯಂತ್ರ ಈಗ ನಡೆದಿದೆ ಅಷ್ಟೇ. ಸರ್ಕಾರವು ಕಾನೂನು ರೀತಿ ಕ್ರಮ ವಹಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳುತ್ತಾರೆ. ಕಾನೂನುರೀತ್ಯ ಕ್ರಮ ಎಂದರೆ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಸ್ವತ್ತನ್ನು ಸದ್ದಿಲ್ಲದೆ ಖಾಸಗಿ ರಿಯಲ್ ಎಸ್ಟೇಟ್ ಪಟ್ಟಭದ್ರರಿಗೆ ಧಾರೆ ಎರೆದುಕೊಡುವುದಾ ಸಚಿವರೇ ಎಂದು ಕೇಳಿದ್ದಾರೆ.