National

ಕಾಶಿ ವಿಶ್ವನಾಥ ಕಾರಿಡಾರ್‌ ವಿಶೇಷತೆ ಏನು..?

ವಾರಾಣಸಿ: ಪ್ರಧಾನಿ ನರೇಂದ್ರಮೋದಿಯವರ ಕನಸಿನ ಯೋಜನೆ ಶ್ರೀ ಕಾಶಿ ವಿಶ್ವನಾಥ ಕಾರಿಡಾರ್.‌ ಇಂದು ಕಾಶಿ ವಿಶ್ವನಾಥ ಕಾರಿಡಾರ್‌ ಲೋಕಾರ್ಪಣೆಯಾಗುತ್ತಿದೆ.  ಇದರಿಂದಾಗಿ ವಾರಾಣಸಿ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಕೂಡಾ ಈ ಕಾರ್ಯಕ್ರಮವನ್ನು ಒಂದು ದೊಡ್ಡ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿದೆ. ಅದಕ್ಕಾಗಿ ಇಡೀ ನಗರವನ್ನು ಸುಂದರವಾಗಿ ಸಿಂಗರಿಸಲಾಗಿದೆ.

32 ತಿಂಗಳುಗಳಲ್ಲಿ ಪೂರ್ತಿಯಾದ ಕಾಶಿ ವಿಶ್ವನಾಥ್‌ ಕಾರಿಡಾರ್

‌      1669ರಲ್ಲಿ ಅಹಿಲ್ಯಾಬಾಯಿ ಹೂಲ್ಕರ್‌ ಕಾಶಿ ವಿಶ್ವನಾಥ್‌ ದೇಗುಲವನ್ನು ಜೀರ್ಣೋದ್ಧಾರ ಮಾಡಿದ್ದರು. ಅನಂತರ ಸರಿಸುಮಾರು 350 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ದೇಗುಲದ ವಿಸ್ತರಣೆ ಹಾಗೂ ಜೀರ್ಣೋದ್ಧಾರಕ್ಕಾಗಿ 2019 ಮಾರ್ಚ್‌ 8ರಂದು ವಿಶ್ವನಾಥ ದೇಗುಲದ ಕಾರಿಡಾರ್‌ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದರು.

    ಅಲ್ಲಿಂದ ಸುಮಾರು ಎರಡು ವರ್ಷ ಎಂಟು ತಿಂಗಳಿಗೆ ಈಗ ಈ ಡ್ರೀಮ್‌ ಪ್ರಾಜೆಕ್ಟ್‌ನ ಬಹುತೇಕ ಕೆಲಸ ಮುಗಿದಿದೆ. ಕಾಶಿವಿಶ್ವನಾಥ ಕಾರಿಡಾರ್‌ ನಿರ್ಮಾಣಕ್ಕೆ 339 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಯೋಜನೆಯಲ್ಲಿ ಒಟ್ಟು 50 ಚದರ ಮೀಟರ್‌ಗಳ ಒಂದು ದೊಡ್ಡ ಪ್ರಾಂಗಣ ನಿರ್ಮಾಣ ಮಾಡಲಾಗಿದೆ. ಇದರ ಮುಖ್ಯ ದ್ವಾರ ಗಂಗಾನದಿ ಭಾಗದ ಲಲಿತಾ ಘಾಟ್‌ ಮೂಲಕ ಇರುತ್ತದೆ.

    ಕಾಶಿ ವಿಶ್ವನಾಥ್‌ ಕಾರಿಡಾರ್‌ನ್ನು ಒಟ್ಟು ಮೂರು ಭಾಗಗಳಾಗಿ ವಿಭಜಿಸಲಾಗಿದೆ. ಮೊದಲನೆಯದು ದೇಗುಲದ ಪ್ರಧಾನ ಭಾಗ. ಇದನ್ನು ರೆಡ್‌ ಸ್ಯಾಂಡ್‌ ಸ್ಟೋನ್‌ನಿಂದ ನಿರ್ಮಿಸಲಾಗಿದೆ.  ಇದರಲ್ಲಿ ನಾಲ್ಕು ದೊಡ್ಡ ದೊಡ್ಡ ದ್ವಾರಗಳಿವೆ. ಒಂದು ಪ್ರದಕ್ಷಿಣೆ ಮಾರ್ಗ ಕೂಡಾ ಇಲ್ಲಿದೆ. ಆ ಪ್ರದಕ್ಷಿಣೆ ಮಾರ್ಗದಲ್ಲಿ 22 ಮಾರ್ಬಲ್ಸ್‌ ಮೇಲೆ ಕಾಶಿ ವಿಶ್ವನಾಥನ ಮಹಿಮೆಯನ್ನು ವರ್ಣಿಸುವ ವಿವರಗಳನ್ನು ಕೆತ್ತಲಾಗಿದೆ.

  ಈ ಕಾರಿಡಾರಿನಲ್ಲಿ 24 ಭವನಗಳನ್ನು ಕೂಡಾ ನಿರ್ಮಿಸಲಾಗಿದೆ. ಇವುಗಳಲ್ಲಿ ಪ್ರಧಾನ ದೇಗುಲ ಪ್ರಾಂಗಣ, ದೇಗುಲ ಚೌರಸ್ತಾ, ಮುಮುಕ್ಷು ಭವನ, ಯಾತ್ರಿಕರ ವಸತಿ ಕೇಂದ್ರ, ಷಾಪಿಂಗ್‌ ಕಾಂಪ್ಲೆಕ್ಸ್‌, ಮಲ್ಟಿಪರ್ಪಸ್‌ ಹಾಲ್‌, ಸಿಟಿ ಮ್ಯೂಸಿಯಂ, ವಾರಾಣಸಿ ಗ್ಯಾಲರಿ, ಗಂಗಾ ವ್ಯೂ ಕೆಫೇ ರೆಸ್ಟೋರೆಂಟ್‌ ಇವೆ.

   ಈ ಧಾಮವನ್ನು ಮತ್ತಷ್ಟು ಆಕರ್ಷಣೀಯವಾಗಿ ಕಾಣುವಂತೆ ಮಾಡಲು ಪ್ರಾಂಗಣದ ಸುತ್ತಲೂ 5 ಸಾವಿರಕ್ಕೂ ಹೆಚ್ಚು ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಈ ವಿಶೇಷ ದೀಪಗಳು ಹಗಲು ಹೊತ್ತು, ಮಧ್ಯಾಹ್ನ, ರಾತ್ರಿ ಬಣ್ಣಗಳನ್ನು ಬದಲಿಸುತ್ತಿರುತ್ತವೆ.

16 ಲಕ್ಷ ಲಡ್ಡುಗಳ ವಿತರಣೆ..!

    ಕಾಶಿ ವಿಶ್ವನಾಥ ಘಾಟ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರ ಮಂದಿ ಅಥಿತಿಗಳು ಪಾಲ್ಗೊಂಡಿದ್ದಾರೆ. ಇದರಲ್ಲಿ ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್‌, ಸಂಸದರು, ಶಾಸಕರು ಸೇರಿದ್ದಾರೆ. ವಾರಾಣಸಿಯಲ್ಲಿ ಇದನ್ನು ಒಂದು ಹಬ್ಬವಾಗಿ ಒಂದು ತಿಂಗಳ ಕಾಲ ಆಚರಣೆ ಮಾಡಲಾಗುತ್ತದೆ. ಇದಕ್ಕೆ ಭವ್ಯ ಕಾಶಿ, ದಿವ್ಯ ಕಾಶಿ ಎಂಬ ಹೆಸರುಗಳನ್ನು ಇಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ವಾರಾಣಸಿಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ತಲುಪುವಂತೆ 16 ಲಕ್ಷ ಲಡ್ಡುಗಳನ್ನು ಹಂಚಲಾಗುತ್ತಿದೆ. ಈ ಲಡ್ಡುಗಳನ್ನು ಕಾರ್ಯಕರ್ತರು ನೇರವಾಗಿ ಅಲ್ಲಿನ ನಿವಾಸಿಗಳ ಮನೆಗಳಿಗೇ ತಲುಪಿಸುತ್ತಾರೆ. ಪ್ರಸಾದದ ಜೊತೆಗೆ ಒಂದು ಸ್ಮರಣಿಕೆ ಕೂಡಾ ವಿತರಣೆ ಮಾಡಲಾಗುತ್ತದೆ.

    ಕಾಶಿ ವಿಶ್ವನಾಥ ದೇಗುಲ ಜನಸಾಂದ್ರತೆ ಹೆಚ್ಚಿರುವ ಪ್ರದೇಶದಲ್ಲಿದೆ. ಹೀಗಾಗಿ ಈ ಕಾರಿಡಾರ್‌ ನಿರ್ಮಾಣಕ್ಕಾಗಿ 400ಕ್ಕೂ ಹೆಚ್ಚು ಆಸ್ತಿಗಳನ್ನು ಖರೀದಿ ಮಾಡಲಾಗಿದೆ. ಇಲ್ಲಿ ವಾಸಿಸುತ್ತಿದ್ದ 1400 ಮಂದಿಯನ್ನು ವಾರಾಣಸಿ ನಗರದ ಇತರೆ ಪ್ರಂತ್ಯಗಳಿಗೆ ಸ್ಥಳಾಂತರಿಸಲಾಗಿದೆ.

    ಈ ಮೋದಿ ಡ್ರೀಮ್‌ ಪ್ರಾಜೆಕ್ಟ್‌ ನಿರ್ಮಾಣಕ್ಕೆ ಸುಮಾರು 2600 ಮಂದಿ ಕಾರ್ಮಿಕರು, 300 ಮಂದಿ ಎಂಜಿನಿಯರ್‌ಗಳು ಕೆಲಸ ಮಾಡಿದ್ದಾರೆ. ಈ ಕಾರಿಡಾರ್‌ ನಿರ್ಮಾಣಕ್ಕಾಗಿ ವಶಪಡಿಸಿಕೊಂಡ 400 ಆಸ್ತಿಗಳಲ್ಲಿ 27 ಕಾಶೀ ಖಂಡೋಕ್ತ ದೇಗುಲಗಳು, 127 ಇತರೆ ದೇಗುಲಗಳು ಕೂಡಾ ಇವೆ. ಇವುಗಳನ್ನು ಕೂಡಾ ಸಂರಕ್ಷಿಸಲಾಗಿದೆ.

Share Post