ಭಾರತದ ಹರ್ನಾಜ್ ಸಂಧುಗೆ ಭುವನ ಸುಂದರಿ ಪಟ್ಟ
ನವದೆಹಲಿ: ಭಾರತದಕ್ಕೆ ಮತ್ತೊಬ್ಬ ಭುವನ ಸುಂದರಿ ಪಟ್ಟ ದಕ್ಕಿದೆ. ಚಂಡೀಗಡದ 21 ವರ್ಷದ ಸುಂದರಿ ಹರ್ನಾಜ್ ಕೌರ್ ಸಂಧು 70ನೇ ಭುವನ ಸುಂದರಿಯಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮಾಜಿ ಭುವನ ಸುಂದರಿ ಮೆಕ್ಸಿಕೋದ ಆಂಡ್ರಿಯಾ ಮೆಕಾ, ಹರ್ನಾಜ್‌ಗೆ ಕಿರೀಟವನ್ನು ತೊಡಿಸುವ ಮೂಲಕ ಹರ್ನಾಜ್‌ಗೆ ಗೌರವಿಸಲಾಯಿತು.
2000ನೇ ಇಸ್ವಿಯಲ್ಲಿ ಭಾರತದ ಲಾರಾ ದತ್ತ ಭುವನ ಸುಂದರಿಯಾಗಿ ಆಯ್ಕೆಯಾಗಿದ್ದರು. 21 ವರ್ಷದ ನಂತರ ಈ ಟೈಟಲ್‌ನ್ನು ಚಂಡೀಗಡದ ಹರ್ನಾಜ್ ಸಂಧು ಪಡೆದುಕೊಂಡಿದ್ದಾರೆ. ಇದೇ ವೇಳೆ ಮಾತನಾಡಿರುವ ಹರ್ಬಾಜ್ ಕೌರ್ ಸಂಧು, ನನಗೆ ಮಾರ್ಗದರ್ಶಕರಾಗಿ ನನ್ನ ಬೆಂಬಲಿಸಿದ ನನ್ನ ತಂದೆ-ತಾಯಿಗಳು, ದೇವರಿಗೆ, ಮಿಸ್ ಇಂಡಿಯಾ ಆರ್ಗನೈಸೇಷನ್‌ಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಗೆಲುವಿಗಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಪ್ರೇಮಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. 21 ವರ್ಷಗಳ ನಂತರ ಮತ್ತೆ ಈ ಪ್ರತಿಷ್ಠಿತ ಭುವನ ಸುಂದರಿ ಕಿರೀಟವನ್ನು ಭಾರತಕ್ಕೆ ತೆಗೆದುಕೊಂಡು ಬರುತ್ತಿರುವುದಕ್ಕೆ ನನಗೆ ಗರ್ವವೆನಿಸುತ್ತದೆ ಎಂದು ಹರ್ನಾಜ್ ಹೇಳಿದ್ದಾರೆ.
ಹರ್ನಾಜ್ ನಟಿ ಹಾಗೂ ರೂಪದರ್ಶಿಯಾಗಿದ್ದಾರೆ. ಜೊತೆಗೆ ಸಾರ್ವಜನಿಕ ಆಡಳಿತದಲ್ಲಿ ಸ್ವಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.