Uniform Civil Code; ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ
ಉತ್ತರಾಖಂಡ; ಎಲ್ಲಾ ಜಾತಿ, ಧರ್ಮ, ಪ್ರದೇಶವೆಂಬ ಬೇಧಭಾವವಿಲ್ಲದೆ ಎಲ್ಲರಿಗೂ ಒಂದೇ ಕಾನೂನು ತರುವ ಸಲುವಾಗಿ ತಯಾರಿಸಲಾಗಿರುವ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು (Uniform Civil Code) ಉತ್ತರಾಖಂಡ್ (Uttarakhand) ವಿಧಾನಸಭೆಯಲ್ಲಿ ಇಂದು ಮಂಡನೆ ಮಾಡಲಾಗಿದೆ. ಭಾನುವಾರ ನಡೆದಿ ಉತ್ತರಾಖಂಡ್ ಸರ್ಕಾರದ ಸಂಪುಟ ಸಭೆಯಲ್ಲಿ ಈ ಏಕರೂಪ ನಾಗರಿಕ ಸಂಹಿತೆ ವರದಿಯನ್ನು ಅಂಗೀಕಾರ ಮಾಡಲಾಗಿತ್ತು. ಇದೀಗ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸದನದಲ್ಲಿ ಮಸೂದೆಯನ್ನು ಮಂಡನೆ ಮಾಡಿದ್ದಾರೆ. ಈ ಮಸೂದೆ ಮೇಲೆ ವಿಧಾನಸಭೆಯಲ್ಲಿ ಚರ್ಚೆ ನಡೆಯಲಿದೆ. ವಿಧಾನಸಭೆಯಲ್ಲಿ ಇದು ಅಂಗೀಕಾರವಾದರೆ, ಉತ್ತರಾಖಂಡ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲಿದೆ.
ಒಂದೊಂದು ಧರ್ಮಕ್ಕೂ ಒಂದೊಂದು ಕಾನೂನು ಯಾಕೆ..?
ವಿವಾಹ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ ಸೇರಿದಂತೆ ಹಲವು ವಿಚಾರಗಳಲ್ಲಿ ಬೇರೆ ಬೇರೆ ಧರ್ಮಗಳಿಗೆ ಬೇರೆ ಬೇರೆ ಕಾನೂನುಗಳಿವೆ. ಮುಸ್ಲಿಂ ಧರ್ಮಕ್ಕೆ ಒಂದು ಕಾನೂನಿದ್ದರೆ, ಹಿಂದೂ ಧರ್ಮಕ್ಕೇ ಒಂದು ಕಾನೂನಿದೆ. ಇತರ ಧರ್ಮಗಳಿಗೂ ತಮ್ಮದೇ ಆದ ಕಾನೂನುಗಳಿವೆ. ಎಲ್ಲರೂ ಒಂದೇ ದೇಶದಲ್ಲಿ ವಾಸಿಸುತ್ತಿರುವಾಗ, ಬೇರೆ ಬೇರೆ ಕಾನೂನುಗಳು ಏಕೆ ಎಂಬ ಪ್ರಶ್ನೆ ಬಂದಿದೆ. ಈ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುಂದಾಗಲಾಗಿದೆ. ಈ ಸಂಹಿತೆ ಜಾರಿಯಾದರೆ, ಎಲ್ಲಾ ಧರ್ಮ, ಜಾತಿ, ಪ್ರದೇಶಗಳೂ ಒಂದೇ ಕಾನೂನು ವ್ಯಾಪ್ತಿಯಲ್ಲಿ ಬರಲಿವೆ.
Uniform Civil Code ಅಳವಡಿಸಿಕೊಂಡ ಮೊದಲ ರಾಜ್ಯವಾಗುತ್ತೆ ಉತ್ತರಾಖಂಡ್
ಉತ್ತರಾಖಂಡ್‌ನಲ್ಲಿ ಬಿಜೆಪಿ ಆಡಳಿತವಿದೆ. ಕೇಂದ್ರ ಬಿಜೆಪಿ ಸರ್ಕಾರ ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಉತ್ತರಾಖಂಡ್‌ನಲ್ಲಿ ಈ ಸಂಹಿತೆಯ ಮಸೂದೆಯನ್ನು ಮಂಡನೆ ಮಾಡಲಾಗಿದೆ. ಈ ಮಸೂದೆ ಸದನದಲ್ಲಿ ಅಂಗೀಕಾರವಾದರೆ, ಅದು ಕಾನೂನಾಗಿ ಮಾರ್ಪಾಟಾಗುತ್ತದೆ. ಆಗ ಉತ್ತರಾಖಂಡ್‌ನಲ್ಲಿ ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗುತ್ತದೆ. ಯಾವುದೇ ಧರ್ಮ ಅಥವಾ ಜಾರಿಯವರಾಗಲೀ, ಯಾವುದೇ ಪ್ರದೇಶದವರಾಗಲೀ, ಒಂದೇ ಕಾನೂನಿನಡಿಯಲ್ಲಿ ಜೀವನ ಮಾಡಬೇಕಾಗುತ್ತದೆ. ಉತ್ತರಾಖಂಡ್ ವಿಧಾನಸಭೆಯಲ್ಲಿ ಈ ಮಸೂದೆ ಅಂಗೀಕಾರವಾದರೆ Uniform Civil Code ಅಳವಡಿಸಿಕೊಂಡು ಭಾರತದ ಮೊದಲ ರಾಜ್ಯ ಉತ್ತರಾಖಂಡ್ ಆಗಲಿದೆ.
ಏಕರೂಪ ನಾಗರಿಕ ಸಂಹಿತೆ ಅಂದ್ರೆ ಏನು..?
ದೇಶದಲ್ಲಿ ಪ್ರತಿಯೊಂದು ಧರ್ಮ, ಜಾತಿ, ಪಂಗಡ, ಪ್ರದೇಶಕ್ಕೆ ಒಂದೇ ಕಾನೂನನ್ನು ಅಳವಡಿಸುವುದು. ಎಲ್ಲರೂ ಕೂಡಾ ಒಂದೇ ಕಾನೂನಿನ ಅಡಿಯಲ್ಲಿ ಜೀವನ ಮಾಡುವುದಾಗಿದೆ. ನಮ್ಮದು ಜಾತ್ಯತೀತ ದೇಶವಾಗಿರುವುದರಿಂದ ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನಿ ಅವಶ್ಯಕತೆ ಇರುವುದಿಲ್ಲ. ಎಲ್ಲರನ್ನೂ ಸಂವಿಧಾನದ ಅಡಿಯಲ್ಲಿ ಒಂದೇ ರೀತಿ ನೋಡಬೇಕಾಗುತ್ತದೆ. ಹೀಗಾಗಿ, ಎಲ್ಲಾ ವಿಚಾರಗಳಲ್ಲೂ ಹೀಗಿರುವ ಕಾನೂನನ್ನು ಮಾರ್ಪಡಿಸಿ, ಎಲ್ಲಾ ಧರ್ಮ, ಜಾತಿಯವರ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರದಂತಹ ವಿಷಯಗಳಲ್ಲಿ ಒಂದೇ ಕಾನೂನು ತರುವುದಾಗಿದೆ.