ಆಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯಾಗುವ ವಿಗ್ರಹ ಯಾವುದು..?; ಕರ್ನಾಟಕ ಮೂರ್ತಿ ಆಯ್ಕೆಯಾಗುತ್ತಾ..?
ಅಯೋಧ್ಯೆ; ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆಯಾಗಲಿದೆ. ಇದಕ್ಕಾಗಿ ಮೂವರು ಕಲಾವಿದರು ಮೂರು ಮೂರ್ತಿಗಳನ್ನು ತಯಾರು ಮಾಡಿದ್ದಾರೆ. ಕರ್ನಾಟಕದ ಇಬ್ಬರು ಹಾಗೂ ರಾಜಸ್ಥಾನದ ಒಬ್ಬರು ಮೂರ್ತಿಗಳನ್ನು ತಯಾರಿಸಿದ್ದಾರೆ. ಇದರಲ್ಲಿ ಒಂದು ಮೂರ್ತಿ ಗರ್ಭಗುಡಿ ಸೇರಲಿದೆ. ಇನ್ನೆರಡು ಮೂರ್ತಿಗಳನ್ನೂ ಅದೇ ದೇಗುಲದಲ್ಲಿ ಇಡಲಾಗುತ್ತದೆ. ಇಂದು ಯಾವ ಮೂರ್ತಿ ಗರ್ಭಗುಡಿ ಸೇರಲಿದೆ ಅನ್ನೋದು ಡಿಸೈಡ್ ಆಗುತ್ತದೆ. ಮತದಾನದ ಪ್ರಕ್ರಿಯೆ ಮೂಲಕ ಇಂದು ಗರ್ಭಗುಡಿ ಸೇರುವ ರಾಮಲಲ್ಲಾ ವಿಗ್ರಹದ ಆಯ್ಕೆ ನಡೆಯಲಿದೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ.
ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್ ಭಟ್ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ತಮ್ಮ ತಮ್ಮ ಮೂರ್ತಿಗಳನ್ನು ಕೆತ್ತನೆ ಮಾಡಿದ್ದಾರೆ. ಈ ಮೂರು ಮೂರ್ತಿಗಳಲ್ಲಿ ಅತ್ಯುತ್ತಮ ವಿನ್ಯಾಸದ ಒಂದು ಮೂರ್ತಿ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತವಾಗುತ್ತದೆ. ಇನ್ನುಳಿದ ಎರಡು ಮೂರ್ತಿಯನ್ನು ರಾಮ ದೇಗುಲದ ಆವರಣದಲ್ಲಿಯೇ ಇಡಲಾಗುತ್ತದೆ.
5 ವರ್ಷದ ಬಾಲರಾಮನ ಮುಗ್ಧತೆಯನ್ನು ಬಿಂಬಿಸುವ ವಿಗ್ರಹಗಳು ಇವಾಗಿವೆ. ಇವನ್ನು ಕೆತ್ತನೆ ಮಾಡೋದಕ್ಕೆ ಆರು ತಿಂಗಳು ಹಿಡಿದಿದೆ. 51 ಇಂಚು ಎತ್ತರದ ವಿಗ್ರಹದಲ್ಲಿ ದೈವಿಕತೆ ಹಾಗೂ ಮಗುವಿನಂತಹ ಮುಗ್ಧತೆ ಇರುವ ವಿಗ್ರಹವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗುತ್ತದೆ.