ಟಿಎಂಸಿಯ ಮಹುವಾ ಮೊಯಿತ್ರಾ ಸಂಸತ್ ಸದಸ್ಯತ್ವ ರದ್ದು!
ನವದೆಹಲಿ; ಲೋಕಸಭೆಯಲ್ಲಿ ಕಾಸಿಗಾಗಿ ಪ್ರಶ್ನೆ ಕೇಳಿದ ಆರೋಪ ಎದುರಿಸುತ್ತಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಸಂಸತ್ ಸದಸ್ಯತ್ವವನ್ನು ರದ್ದು ಮಾಡಲಾಗಿದೆ. ಈ ಪ್ರಕರಣ ಸಂಬಂಧ ನೈತಿಕ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ವರದಿ ಮಂಡಿಸಿದ್ದು, ಮಹುವಾ ಮೊಯಿತ್ರಿ ಅವರ ಸದಸ್ಯತ್ವ ರದ್ದು ಮಾಡಬೇಕೆಂದು ಶಿಫಾರಸು ಮಾಡಿತ್ತು. ಇದರ ಆಧಾರದ ಮೇಲೆ ಲೋಕಸಭಾ ಸ್ಪೀಕರ್ ಮಹುವಾ ಅವರ ಸದಸ್ಯತ್ವವನ್ನು ರದ್ದು ಮಾಡಿದ್ದಾರೆ.
ಇನ್ನು ಸದಸ್ಯತ್ವ ರದ್ದುಗೊಳಿಸಿದ ನಂತರ ಮಹುವಾ ಅವರು ಮಾತನಾಡಿದ್ದಾರೆ. ದಾಖಲೆ ಇಲ್ಲದೆ, ನನ್ನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ನೈತಿಕ ಸಮಿತಿ ಯಾವುದೇ ತನಿಖೆ ನಡೆಸಲಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಿದೆ ಎಂದು ಆರೋಪ ಮಾಡಿದ್ದಾರೆ.
ಸಂಸತ್ತಿನಲ್ಲಿ ಕೇಂದ್ರವನ್ನು ಪ್ರಶ್ನಿಸಲು ಮಹುವಾ ಮೊಯಿತ್ರಾ ಅವರು ಉದ್ಯಮಿಯೊಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಸಂಸದ ಮೊಯಿತ್ರಾ ಅವರು ಅದಾನಿ ಗ್ರೂಪ್ ಕಂಪನಿಗಳನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಮತ್ತು ಪ್ರತಿಯಾಗಿ ಉದ್ಯಮಿಯೊಬ್ಬರಿಂದ ದುಬಾರಿ ಉಡುಗೊರೆ ಮತ್ತು ನಗದು ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಮೊಯಿತ್ರಾ ಆರೋಪವನ್ನು ನಿರಾಕರಿಸಿದ್ದು, ಯಾವುದೇ ವಿಚಾರಣೆ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದ್ದರು. ದುಬೆ ಅವರ ಆರೋಪಗಳನ್ನು ಸಂಸದೀಯ ನೀತಿ ಸಮಿತಿಯು ತನಿಖೆ ನಡೆಸಿತು. ಮಹುವಾ ಮೊಯಿತ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೈತಿಕ ಸಮಿತಿ ತನ್ನ ವರದಿಯಲ್ಲಿ ಹೇಳಿದೆ. ಸಮಿತಿಯ ಶಿಫಾರಸನ್ನು ಸದನ ಒಪ್ಪಿದೆ ಎಂದು ಲೋಕಸಭೆಯ ಸ್ಪೀಕರ್ ಹೇಳಿದ್ದಾರೆ. ಸಂಸದೆಯಾಗಿ ಮಹುವಾ ಮೊಯಿತ್ರಾ ಅವರ ನಡವಳಿಕೆ ಅನೈತಿಕ ಮತ್ತು ಅನುಚಿತವಾಗಿದ್ದು, ಅವರು ಸಂಸದರಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದು ನೈತಿಕ ಸಮಿತಿ ಹೇಳಿದ್ದು, ಅದಕ್ಕೆ ಸದನ ಒಪ್ಪಿಗೆ ನೀಡಿದೆ ಎಂದು ಸ್ಪೀಕರ್ ಹೇಳಿದರು.