ನವೆಂಬರ್ 21ಕ್ಕೆ ಬಳ್ಳಾರಿಯಲ್ಲಿ ಬಿಜೆಪಿ ನವಶಕ್ತಿ ಸಮಾವೇಶ
ಬಳ್ಳಾರಿ; ಮುಂಬರುವ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳೂ ಸಜ್ಜಾಗುತ್ತಿವೆ. ಒಂದು ಕಡೆ ಜೆಡಿಎಸ್ ಪಂಚರತ್ನ ಯಾತ್ರೆ ಶುರು ಮಾಡಿದೆ. ಕಾಂಗ್ರೆಸ್ ಕೂಡಾ ಅಖಾಡಕ್ಕೆ ಸಜ್ಜಾಗಿ ನಿಂತಿದೆ. ಈ ನಡುವೆ ಬಿಜೆಪಿ ಕೂಡಾ ರಾಜ್ಯಾದ್ಯಂತ ಸಮಾವೇಶಗಳನ್ನು ನಡೆಸುತ್ತಿದೆ. ಇದರ ನಡುವೆ ಕಲ್ಯಾಣ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಎಸ್ಸಿ, ಎಸ್ಟಿ ಸಮಾವೇಶ ನಡೆಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಬಳ್ಳಾರಿಯಲ್ಲಿ ನವೆಂಬರ್ 20ರಂದು ಎಸ್ಸಿ, ಎಸ್ಟಿ ಮೋರ್ಚಾ ನವಶಕ್ತಿ ಸಮಾವೇಶ ನಡೆಯಲಿದ್ದು, ಇದಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆದಿದೆ.
ಇತ್ತೀಚೆಗಷ್ಟೇ ಸರ್ಕಾರ ಎಸ್ಟಿ ಮೀಸಲಾತಿ ಹೆಚ್ಚಿಸಿ ತೀರ್ಮಾನ ಕೈಗೊಂಡಿತ್ತು. ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಬಳ್ಳಾರಿಯಲ್ಲಿ ಸಮಾವೇಶ ನಡೆಸಿ, ಕಲ್ಯಾಣ ಕರ್ನಾಟಕ ನಲವತ್ತಕ್ಕೂ ಹೆಚ್ಚು ಕ್ಷೇತ್ರಗಳನ್ನು ಯೋಜನೆ ಹಾಕಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹತ್ತಕ್ಕೂ ಹೆಚ್ಚು ಪ್ರಬಲ ನಾಯಕರು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಜನಾರ್ದನರೆಡ್ಡಿ ಈ ಸಮಾವೇಶಕ್ಕೆ ಬರಲು ಆಗದಿರುವುದಕ್ಕೆ ಶ್ರೀರಾಮುಲು ಅವರಿಗೆ ಬೇಸರ ಇದೆ ಎಂದು ಹೇಳಲಾಗುತ್ತಿದೆ. ಜನಾರ್ದನರೆಡ್ಡಿಗೆ ಬಳ್ಳಾರಿ ಭೇಟಿ ನೀಡಲು ನಿರ್ಬಂಧ ಇದೆ ಈ ಹಿನ್ನೆಲೆಯಲ್ಲಿ ಅವರು ಸಮಾವೇಶದಲ್ಲಿ ಪಾಲ್ಗೊಳ್ಳುವುದಿಲ್ಲ.