ಐಸಿಸ್ ನಂಟಿನ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಸಿಎಂ; ಸಿದ್ದರಾಮಯ್ಯರಿಂದಲೂ ಫೋಟೋಸ್ ರಿಲೀಸ್
ಬೆಂಗಳೂರು; ಸಿಎಂ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡಿದ್ದ ತನ್ವೀರ್ ಹಾಶ್ಮಿಗೆ ಐಸಿಸ್ ಲಿಂಕ್ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದರು. ಈಗ ಇದಕ್ಕೆ ಸಿಎಂ ಸಿದ್ದರಾಮಯ್ಯ ಟ್ವಿಸ್ಟ್ ಕೊಟ್ಟಿದ್ದಾರೆ. ಯತ್ನಾಳ್ ಅವರ ಗುರಿ ನಾನಲ್ಲ ಪ್ರಧಾನಿ ನರೇಂದ್ರ ಮೋದಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
ಮೌಲ್ವಿ ತನ್ವೀರ್ ಹಾಶ್ಮಿ ಜೊತೆ ಬಿಜೆಪಿ ನಾಯಕರು, ಅಷ್ಟೇ ಏಕೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಸಂಬಂಧ ಹೊಂದಿದ್ದಾರೆ. ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಫೋಟೋಗಳೇ ಇದಕ್ಕೆ ಸಾಕ್ಷಿ ಹೇಳುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ. ಮೋದಿ ಸೇರಿದಂತೆ ಹಲವು ಬಿಜೆಪಿ ಮುಖಂಡರ ಜೊತೆ ತನ್ವೀರ್ ಹಾಶ್ಮಿ ಇರುವ ಫೋಟೋಗಳನ್ನೂ ಸಿಎಂ ಸಿದ್ದರಾಮಯ್ಯ ಲಗತ್ತಿಸಿದ್ದಾರೆ. ಯತ್ನಾಳ್ ಅವರಿಗೆ ದೀರ್ಘಕಾಲದಿಂದ ತನ್ವೀರ್ ಹಾಶ್ಮಿ ಅವರೊಂದಿಗೆ ಅತ್ಯಂತ ಆತ್ಮೀಯರಾಗಿದ್ದಾರೆ. ಜೊತೆಗೆ ಊರಿನಲ್ಲಿ ತನ್ವೀರ್ ಹಾಶ್ಮಿಗೆ ನೆರೆಹೊರೆಯಾಗಿರುವ ಯತ್ನಾಳ್ ಅವರಿಗೆ ಇದು ತಿಳಿದಿರಲಿಲ್ಲ ಎನ್ನುವುದನ್ನು ನಂಬಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಮೌಲ್ವಿ ಹಾಶ್ಮಿ ಅವರ ಜೊತೆಗಿನ ನನ್ನ ಸ್ನೇಹ ಸಂಬಂಧವನ್ನು ನಾನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದೇನೆ. ಹಾಶ್ಮಿಯವರೂ ಕೂಡಾ ಅವರ ಮೇಲಿನ ಆರೋಪದ ತನಿಖೆಯನ್ನು ಕೇಂದ್ರ ಸರ್ಕಾರವೇ ನಡೆಸಲಿ ಎಂದು ಸವಾಲು ಹಾಕಿದ್ದಾರೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.