ಗುತ್ತಿಗೆ ಶಿಕ್ಷಕರ ನೇಮಕಕ್ಕೂ ಹೊರಗುತ್ತಿಗೆಯಂತೆ; ಡಿಟೆಕ್ಟಿವ್ ಕಂಪನಿಗೆ ಶಿಕ್ಷಕರ ಸರಬರಾಜು ಜವಾಬ್ದಾರಿಯಂತೆ..!
ಬೆಂಗಳೂರು; ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸರ್ಕಾರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದ್ರೆ, ವಿಚಿತ್ರ ಎಂಬಂತೆ ಬಿಬಿಎಂಪಿ ಬೆಂಗಳೂರಿನಲ್ಲಿರುವ ಬಿಬಿಎಂಪಿ ಶಾಲೆ, ಕಾಲೇಜುಗಳಿಗೆ ಗುತ್ತಿಗೆ ಶಿಕ್ಷಕರನ್ನು ಸರಬರಾಜು ಮಾಡಲು ಹೊರಗುತ್ತಿಗೆ ನೀಡಿದೆ. ಅದೂ ಕೂಡಾ ಶಿಕ್ಷಕರನ್ನು ಸರಬರಾಜು ಮಾಡುವ ಜವಾಬ್ದಾರಿಯನ್ನು ಡೆಟೆಕ್ಟಿವ್ ಕಂಪನಿಯೊಂದಕ್ಕೆ ನೀಡಿದೆ. ಡಿಟೆಕ್ಟಿವ್ ಕೆಲಸ ಮಾಡುವವರು ಅದೇ ಹೇಗೆ ಶಿಕ್ಷಕರನ್ನು ಸರಬರಾಜು ಮಾಡುತ್ತಾರೋ ಆ ದೇವರೇ ಬಲ್ಲ. ಬಿಬಿಎಂಪಿ ಈ ಕ್ರಮ ನಗೆ ಪಾಟಲಿಗೀಡಾಗಿದೆ. ಶಾಸಕ ಸುರೇಶ್ ಕುಮಾರ್ ಕೂಡಾ ಬಿಬಿಬಿಎಂಪಿ ಈ ಆದೇಶವನ್ನು ಲೇವಡಿ ಮಾಡಿದ್ದಾರೆ.
ಬಿಎಂಪಿ ದಕ್ಷಿಣ ಹಾಗೂ ಆರ್ಆರ್ ನಗರ ಜೋನ್ನಲ್ಲಿ ಬರುವ ಶಾಲೆ, ಕಾಲೇಜುಗಳಿಗೆ ಗುತ್ತಿಗೆ ಶಿಕ್ಷಕರ ನೇಮಕಕ್ಕೆ ಅಪ್ಪು ಡಿಟೆಕ್ಟಿವ್ ಅಂಡ್ ಸೆಕ್ಯೂರಿಟಿಸ್ ಸರ್ವೀಸಸ್ ಗೆ ಹೊರಗುತ್ತಿಗೆ ನೀಡಿ ಬಿಬಿಎಂಪಿ ಆದೇಶ ಹೊರಡಿಸಿದೆ. ಇದಕ್ಕಾಗಿ ಬಿಬಿಎಂಪಿ 3 ಕೋಟಿ 40 ಲಕ್ಷದ 48 ಸಾವಿರದ 611 ರೂಪಾಯಿಗೆ ಟೆಂಡರ್ ಗೆ ಅನುಮೋದನೆ ನೀಡಿದೆ.
ಈ ರೀತಿಯಾಗಿ ಗುತ್ತಿಗೆ ಶಿಕ್ಷಕರ ಸರಬರಾಜಿಗೆ ಹೊರಗುತ್ತಿಗೆ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಜೊತೆಗೆ ಡಿಟೆಕ್ಟಿವ್ ಹಾಗೂ ಸೆಕ್ಯೂರಿಟಿ ಸರ್ವೀಸ್ ನೀಡುವ ಕಂಪನಿಗೆ ಶಿಕ್ಷಕರನ್ನು ಸರಬರಾಜು ಮಾಡುವ ಜವಾಬ್ದಾರಿ ಕೊಟ್ಟಿರುವುದೂ ಕೂಡಾ ಪ್ರಶ್ವಾರ್ಹವಾಗಿದೆ.