ತೆಲುಗು ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಜಾಹೀರಾತು; ತೆಲಂಗಾಣದಲ್ಲಿ ನಗೆಪಾಟಲಿಗೀಡಾದ ಸಿದ್ದರಾಮಯ್ಯ ಸರ್ಕಾರ!
ಹೈದರಾಬಾದ್; ನವೆಂಬರ್ 30ರಂದು ತೆಲಂಗಾಣ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಪಕ್ಷ ಆರು ಉಚಿತ ಗ್ಯಾರೆಂಟಿಗಳ ಭರವಸೆ ನೀಡುತ್ತಿದೆ. ಇದರ ನಡುವೆ ಕರ್ನಾಟಕದ ನಾಯಕರು ಕೂಡಾ ಅಲ್ಲಿ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆ ಕರ್ನಾಟಕ ಸರ್ಕಾರ ತೆಲುಗಿನಲ್ಲಿ ಜಾಹೀರಾತು ನೀಡಿದೆ. ಕರ್ನಾಟಕ ಸರ್ಕಾರ ಉಚಿತ ಗ್ಯಾರೆಂಟಿಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ತಿಳಿಸುವ ಜಾಹೀರಾತು ಅದಾಗಿದ್ದು, ತೆಲಂಗಾಣದ ತೆಲುಗು ಪತ್ರಿಕೆಗಳಿಗೆ ಒಂದು ಪೂರ್ಣ ಪುಟದ ಜಾಹೀರಾತು ನೀಡಲಾಗಿದೆ. ಈ ಜಾಹೀರಾತು ಕಾಂಗ್ರೆಸ್ಗೆ ಅನುಕೂಲವಾಗುವ ಬದಲು ನಗೆಪಾಟಲಿಗೀಡಾಗಿದೆ.
ಕರ್ನಾಟಕದಲ್ಲಿ ಐದು ಗ್ಯಾರೆಂಟಿಗಳ ಭರವಸೆ ನೀಡಲಾಗಿದ್ದು, ಇದರಲ್ಲಿ ನಾಲ್ಕು ಗ್ಯಾರೆಂಟಿಗಳನ್ನು ಜಾರಿ ಮಾಡಲಾಗಿದೆ. ಐದನೇ ಗ್ಯಾರೆಂಟಿ ಯುವನಿಧಿ ಕೂಡಾ ಶೀಘ್ರದಲ್ಲೇ ಜಾರಿ ಮಾಡಲಾಗುತ್ತದೆ. ಈ ಯೋಜನೆಗಳಿಂದ ಜನಕ್ಕೆ ಎಷ್ಟು ಅನುಕೂಲ ಆಗಿದೆ ಎಂದು ಈ ಜಾಹೀರಾತಿನಲ್ಲಿ ಪ್ರಕಟಿಸಲಾಗಿದೆ. ಒಂದೊಂದು ಯೋಜನೆಗೆ ಒಬ್ಬೊಬ್ಬ ಫಲಾನುಭವಿಯ ಅಭಿಪ್ರಾಯ ಪಡೆಯಲಾಗಿದೆ. ಫೋಟೋ ಸಮೇತ ಫಲಾನುಭವಿಯ ಅಭಿಪ್ರಾಯವನ್ನು ಪ್ರಕಟಿಸಲಾಗಿದೆ. ಆದ್ರೆ ಇದು ಸುಳ್ಳು ಅಭಿಪ್ರಾಯಗಳು ಅನ್ನೋದಕ್ಕೆ ಸಾಕ್ಷಿ ಸಿಕ್ಕಿಬಿಟ್ಟಿದೆ. ಜಾಹೀರಾತಿನಲ್ಲಿ ಪ್ರಕಟವಾದ ಐದು ಮಂದಿಯ ಫೋಟೋಗಳಲ್ಲಿ ಸಿ.ಕೆ.ಮಹೇಶ್ ಹೆಸರಿನ ಫೋಟೋ ಒಬ್ಬ ಮಾಡೆಲ್ದು ಎಂಬುದು ಗೊತ್ತಾಗಿದೆ. ಹಲವಾರು ಜಾಹೀರಾತುಗಳಲ್ಲಿ ಈ ಮಾಡೆಲ್ ಕಾಣಿಸಿಕೊಂಡಿದ್ದಾನೆ. ಇದೇ ಮಾಡೆಲ್ ಫೋಟೋ ಇಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಸರ್ಕಾರ ಯುವನಿಧಿ ಯೋಜನೆ ಪಡೆಯಲು ಕಾದಿರುವ ಫಲಾನುಭವಿ ಎಂಬಂತೆ ಜಾಹೀರಾತಿನಲ್ಲಿ ಬಿಂಬಿಸಿದೆ.
ಕರ್ನಾಟಕ ಸರ್ಕಾರ ತಮ್ಮ ಸರ್ಕಾರದ ಯೋಜನೆಗಳನ್ನು ಬೇರೊಂದು ರಾಜ್ಯದಲ್ಲಿ ಪ್ರಚಾರ ಮಾಡುವ ಅಗತ್ಯವೇ ಇಲ್ಲ. ಆದ್ರೆ ತೆಲಂಗಾಣದಲ್ಲಿ ಕಾಂಗ್ರೆಸ್ಗೆ ಅನುಕೂಲವಾಗಲಿ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರ, ಜನರ ತೆರಿಗೆ ದುಡ್ಡನ್ನು ಪತ್ರಿಕೆಗಳ ಜಾಹೀರಾತುಗಳಿಗೆ ಸುರಿದಿದೆ. ಪತ್ರಿಕೆಗಳ ಜಾಹೀರಾತಿಗೆ ಲಕ್ಷಾಂತರ ರೂಪಾಯಿ ಸುರಿದಿರುವುದಲ್ಲದೇ, ನಿಜವಾದ ಫಲಾನುಭವಿಗಳ ಅಭಿಪ್ರಾಯವನ್ನೂ ಪ್ರಕಟಿಸಿಲ್ಲ. ಹೀಗಾಗಿ, ಬಿಆರ್ಎಸ್, ಬಿಜೆಪಿ ನಾಯಕರು ಇದನ್ನು ಡೋಂಗಿತನ ಎಂದು ಲೇವಡಿ ಮಾಡುತ್ತಿವೆ.