National

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಉತ್ತರ ಪ್ರದೇಶ ಪೊಲೀಸರು, ಯಾಕೆ ಗೊತ್ತೆ..?

ತಿರುಪತಿ: ದೇಶದ ಜನತೆ ಬಹುದಿನಗಳಿಂದ ಕಾಯುತ್ತಿರುವ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ರಾಮಮಂದಿರ ಪೂರ್ಣಗೊಂಡ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಒಮ್ಮೆ ದೇವಸ್ಥಾನ ತೆರೆದರೆ ನಿತ್ಯ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ದೇವಸ್ಥಾನ ಮತ್ತು ಭಕ್ತರ ಭದ್ರತೆಗಾಗಿ ಉತ್ತರ ಪ್ರದೇಶ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಯುಪಿ ಪೊಲೀಸರು ತಿರುಪತಿಗೆ ಭೇಟಿ ನೀಡಿದ್ದಾರೆ.

ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುವ ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಭದ್ರತೆ ಕುರಿತು ಅಧ್ಯಯನ ನಡೆಸಲಿದ್ದಾರೆ. ತಿರುಮಲ ದೇಗುಲ ಮಾದರಿಯ ಭದ್ರತೆಯನ್ನು ಅಯೋಧ್ಯೆಯಲ್ಲೂ ಅಳವಡಿಸಲು ಉತ್ತರ ಪ್ರದೇಶ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ತಿರುಮಲ ದೇವಸ್ಥಾನದ ಭದ್ರತೆ ಕುರಿತು ಅಧ್ಯಯನ ನಡೆಸಲು ಉತ್ತರ ಪ್ರದೇಶ ಪೊಲೀಸರ ತಂಡ ಬುಧವಾರ ತಿರುಮಲಕ್ಕೆ ಆಗಮಿಸಿದೆ. ಯುಪಿ ಡಿಐಜಿ ಸುಭಾಷ್ ಚಂದ್ರ ದೋಬೆ ಮತ್ತು ವಿನೋದ್ ಕೆ ಸಿಂಗ್ ನೇತೃತ್ವದ ಪೊಲೀಸ್ ತಂಡ ತಿರುಮಲದ ಪದ್ಮಾವತಿ ಅತಿಥಿ ಗೃಹದಲ್ಲಿ ಸಭೆ ನಡೆಸಿದ್ದಾರೆ. ತಿರುಪತಿ ನಗರ ಎಸ್ಪಿ ವೆಂಕಟ ಅಪ್ಪಲನಾಯುಡು, ಟಿಟಿಡಿ ಮುಖ್ಯ ಭದ್ರತಾ ಅಧಿಕಾರಿ ಗೋಪಿನಾಥ್ ಗೆಟ್ಟಿ ಅವರು ಉತ್ತರ ಪ್ರದೇಶ ಪೊಲೀಸರಿಗೆ ತಿರುಮಲದಲ್ಲಿ ಭದ್ರತಾ ವಿವರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಎಸ್‌ಪಿ ವೆಂಕಟ ಅಪ್ಪಲನಾಯ್ಡು ಮಾತನಾಡಿ, ತಿರುಮಲ ಬೆಟ್ಟದ ಕೆಳಭಾಗದಲ್ಲಿರುವ ಅಲಿಪಿರಿ ಚೆಕ್‌ಪಾಯಿಂಟ್‌ನಲ್ಲಿ ವಾಹನ ತಪಾಸಣೆ, ನಿಷೇಧಿತ ವಸ್ತುಗಳು ಮತ್ತು ಸಾಮಗ್ರಿಗಳ ಮೇಲೆ ಕಡಿವಾಣ, ಪಾದಚಾರಿ ತಪಾಸಣೆ, ಸರತಿ ಸಾಲು ನಿರ್ವಹಣೆ, ಅಕ್ಟೋಪಸ್, ಬಾಂಬ್, ಶ್ವಾನ ದಳದ ಗಸ್ತು, ದೇವಸ್ಥಾನ ಪ್ರವೇಶಿಸುವ ಭಕ್ತರ ಸಂಪೂರ್ಣ ತಪಾಸಣೆ ಇತ್ಯಾದಿಗಳ ಬಗ್ಗೆ ವಿವರಿಸಿದರು. ಅಯೋಧ್ಯೆಯಲ್ಲಿಯೂ ಇದೇ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಯುಪಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share Post