ತೆಲಂಗಾಣ ಚುನಾವಣೆ; ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ವೈ,.ಎಸ್.ಶರ್ಮಿಳಾ ಪಕ್ಷ
ಹೈದರಾಬಾದ್; ತೆಲಂಗಾಣ ಚುನಾವಣೆ ಕಾವು ಜೋರಾಗುತ್ತಿದೆ. ಆಡಳಿತಾರೂಢ ಬಿಎಸ್‌ಆರ್ ಪಕ್ಷವನ್ನು ಮಣಿಸಲು ಒಂದು ಕಡೆ ಕಾಂಗ್ರೆಸ್, ಮತ್ತೊಂದು ಕಡೆ ಬಿಜೆಪಿ ಸಾಕಷ್ಟು ಕಸರತ್ತು ನಡೆಸುತ್ತಿವೆ. ಈ ನಡುವೆ ಮತ ವಿಭಜನೆಯ ಭೀತಿ ಎದುರಿಸುತ್ತಿದ್ದ ಕಾಂಗ್ರೆಸ್‌ಗೆ ರಿಲೀಫ್ ಸಿಕ್ಕಿದೆ. ಹಲವು ಕ್ಷೇತ್ರಗಳಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಲು ಸಿದ್ಧತೆ ನಡೆಸಿದ್ದ ವೈಎಸ್‌ಆರ್ ತೆಲಂಗಾಣ ಪಾರ್ಟಿ ಅಧ್ಯಕ್ಷೆ ಶರ್ಮಿಳಾ ಅವರು ತಮ್ಮ ನಿರ್ಧಾರವನ್ನು ವಾಪಸ್ ಪಡೆದಿದ್ದಾರೆ. ತೆಲಂಗಾಣದಲ್ಲಿ ಈ ಬಾರಿ ಪಕ್ಷದ ಅಭ್ಯರ್ಥಿಗಳನ್ನು ಹಾಕದೇ ಕಾಂಗ್ರೆಸ್‌ಗೆ ಸಪೋರ್ಟ್ ಮಾಡಲು ನಿರ್ಧಾರ ಮಾಡಿದ್ದಾರೆ. ಇಂದು ಅವರು ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ತಿಳಿಸಿದ್ದಾರೆ.
ಮಾಜಿ ಸಿಎಂ ವೈ.ಎಸ್.ರಾಜಶೇಖರರೆಡ್ಡಿ ಪುತ್ರಿ ವೈ.ಎಸ್.ಶರ್ಮಿಳಾ ಅವರು ತೆಲಂಗಾಣದಲ್ಲಿ ಹೊಸ ಪಾರ್ಟಿ ಕಟ್ಟಿ ಹಲವು ವರ್ಷಗಳಿಂದ ತೆಲಂಗಾಣದಾದ್ಯಂತ ಸುತ್ತಾಡಿ ಪಕ್ಷ ಸಂಘಟನೆ ಮಾಡಿದ್ದರು. ಅಷ್ಟೇ ಏಕೆ ಪಾದಯಾತ್ರೆ ಮಾಡಿ ತೆಲಂಗಾಣ ಸರ್ಕಾರದ ವಿರುದ್ಧ ಅಬ್ಬರಿಸಿದ್ದರು. ಆದ್ರೆ ಅವರು ಬಯಸಿದಂತೆ ತೆಲಂಗಾಣದಲ್ಲಿ ಅವರಿಗೆ ಸಪೋರ್ಟ್ ಸಿಗಲಿಲ್ಲ. ಈ ನಡುವೆ ಶರ್ಮಿಳಾ ಅವರು ಹಲವು ಭಾರಿ ಕಾಂಗ್ರೆಸ್ ಹೈಕಮಾಂಡ್‌ನ್ನು ಭೇಟಿ ಮಾಡಿದ್ದರು. ರಾಹುಲ್ ಗಾಂಧಿಯವರನ್ನು ಎರಡು ಮೂರು ಬಾರಿ ಭೇಟಿ ಮಾಡಿ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡುವುದರ ಕುರಿತು ಮಾತನಾಡಿದ್ದರು. ಆದ್ರೆ ಮಾತುಕತೆಗಳು ಫಲಪ್ರದವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಶರ್ಮಿಳಾ ಅವರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸೋದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದ್ರೆ ಇದೀಗ ಅವರು ನಿರ್ಧಾರ ಬದಲಿಸಿದ್ದಾರೆ. ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದರೆ ಮತಗಳು ವಿಭಜನೆಯಾಗಿ ಬಿಆರ್‌ಎಸ್‌ಗೆ ಲಾಭವಾಗುತ್ತದೆ. ಆದ್ರೆ ನಮ್ಮ ಉದ್ದೇಶ ಬಿಆರ್‌ಎಸ್ ಪಕ್ಷವನ್ನು ಸೋಲಿಸೋದು. ಹೀಗಾಗಿಯೇ ಈ ಬಾರಿ ಚುನಾವಣೆಯನಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧಾರ ಮಾಡಿದೆ ಎಂದು ಶರ್ಮಿಳಾ ಹೇಳಿಕೊಂಡಿದ್ದಾರೆ.
ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಮಾಡಿದ ಪಾದಯಾತ್ರೆಗೆ ಉತ್ತಮ ಫಲಿತಾಂಶ ಸಿಕ್ಕಿದೆ. ತೆಲಂಗಾಣದಲ್ಲೂ ಅದೇ ಫಲಿತಾಂಶವನ್ನು ಪಡೆಯುವ ಉದ್ದೇಶದಿಂದ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಶರ್ಮಿಳಾ ಹೇಳಿದರು. ವೈಎಸ್‌ಆರ್‌ಟಿಪಿ ರಚನೆಯಾದಾಗಿನಿಂದ ತೆಲಂಗಾಣ ಜನತೆಯ ಒಳಿತಿಗಾಗಿಯೇ ನಾನು ನಿರ್ಧಾರ ಕೈಗೊಂಡಿದ್ದೇನೆ. ಈ ನಿರ್ಧಾರವೂ ಕೂಡಾ ಅದೇ ಆಗಿದೆ ಎಂದು ಶರ್ಮಿಳಾ ಹೇಳಿದ್ದಾರೆ.
ವೈಎಸ್‌ಆರ್‌ಟಿಪಿಎ ಎಲ್ಲಾ ಕಾರ್ಯಕರ್ತರೂ ಕಾಂಗ್ರೆಸ್‌ನ್ನು ಬೆಂಬಲಿಸಬೇಕು, ಕಾಂಗ್ರೆಸ್ ಗೆಲ್ಲಲು ಸಹಕಾರ ನೀಡಬೇಕು ಎಂದು ವೈ.ಎಸ್.ಶರ್ಮಿಳಾ ಮನವಿ ಮಾಡಿದ್ದಾರೆ. ಬಹಳ ನೋವಿನಿಂದಲೇ ಈ ನಿರ್ಧಾರ ಕೈಗೊಂಡಿದ್ದೇನೆ. ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರೆ ಹೋರಾಟ ಮಾಡುವ ಕಾಲ ಇನ್ನೂ ಬಂದಿಲ್ಲ ಅಂತ ಲೆಕ್ಕ. ಬೇಗ ಆ ಸಮಯ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ನಿರ್ಧಾರದಿಂದ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದೂ ಶರ್ಮಿಳಾ ಹೇಳಿದ್ದಾರೆ.
ತಾಳ್ಮೆ ಮತ್ತು ಪ್ರಾಮಾಣಿಕತೆ ಇಲ್ಲದಿದ್ದರೆ ರಾಜಕೀಯದಲ್ಲಿ ಇರಲು ಸಾಧ್ಯವಿಲ್ಲ. ಪಾಲೇರು ಜನರ ಪರ ನಿಲ್ಲುತ್ತೇನೆ ಎಂದು ಹೇಳಿದ್ದೆ. ಆದರೆ ಇಂದು ಪಾಲೇರು ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕಾಂಗ್ರೆಸ್ ಪಕ್ಷದಿಂದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಪಾಲೇರು ಕ್ಷೇತ್ರದಲ್ಲಿ ನಿಂತಿದ್ದಾರೆ. 2013 ರಲ್ಲಿ, ನಾನು 3100 ಕಿಮೀ ನಡೆದು, ಖಮ್ಮಮ್‌ನಲ್ಲಿ ಸುಮಾರು 600 ಕಿಮೀ ನಡೆದಿದ್ದೇನೆ, ಪೊಂಗುಲೇಟಿ ಅಣ್ಣ ಪ್ರತಿದಿನ ನನ್ನ ಪಕ್ಕದಲ್ಲಿದ್ದರು. ರಾಜಶೇಖರ್ ರೆಡ್ಡಿ ಸತ್ತಾಗ ನೋವು ತಾಳಲಾರದೆ 700 ಜನ ಸತ್ತರೆ ಅವರಲ್ಲಿ 400 ಜನ ತೆಲಂಗಾಣದವರು ಎಂದು ಶರ್ಮಿಳಾ ನೆನಪಿಸಿಕೊಂಡಿದ್ದಾರೆ.