ಲೋಕಸಭೆಯಲ್ಲಿ ಕೃಷಿ ಕಾನೂನು ರದ್ದು ಮಸೂದೆ ಅಂಗೀಕಾರ
ನವದೆಹಲಿ: ರೈತರ ತೀವ್ರ ವಿರೋಧದ ಹಿನ್ನೆಯಲ್ಲಿ ಮೂರು ಕೃಷಿ ತಿದ್ದುಪಡಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಗೆ ಇಂದು ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಮೂರು ಕೃಷಿ ತಿದ್ದುಪಡಿ ಮಸೂದೆಗಳಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ರೈತರ ಸಂಘಟನೆಗಳು ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದವು. ಇದಕ್ಕೆ ಮಣಿದ ಕೇಂದ್ರ ಸರ್ಕಾರ, ಮೂರೂ ಕಾಯ್ದೆಗಳನ್ನು ವಾಪಸ್ ಪಡೆಯವುದಾಗಿ ಹೇಳಿತ್ತು. ಅದರಂತೆ ಚಳಿಗಾಲದ ಅಧಿವೇಶನದ ಮೊದಲ ದಿನವೇ ಕೃಷಿ ತಿದ್ದುಪಡಿ ಕಾನೂನು ರದ್ದುಗೊಳಿಸುವ ಕಾನೂನಿಗೆ ಅಂಗೀಕಾರ ನೀಡಲಾಗಿದೆ.
ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರ ಘೋಷಣೆಗಳ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ‘ಕೃಷಿ ಕಾನೂನುಗಳ ರದ್ದತಿ ಮಸೂದೆ 2021‘ ಅನ್ನು ಮಂಡಿಸಿದರು. ಈ ಮಸೂದೆ ಕುರಿತು ಚರ್ಚೆಯಾಗಲೇಬೇಕೆಂದು ವಿರೋಧ ಪಕ್ಷಗಳು ಪಟ್ಟುಹಿಡಿದವು. ವಿರೋಧ ಪಕ್ಷಗಳ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತೀವ್ರ ಗದ್ದಲದ ವಾತಾವರಣ ಸೃಷ್ಟಿಯಾದ ಕಾರಣ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 2ರವರೆಗೆ ಮುಂದೂಡಿದರು.