DistrictsPolitics

ಕಷ್ಟಕಾಲದಲ್ಲಿ ಬೆನ್ನಿಗಿದ್ದೀರಿ; ಕುಮಾರಸ್ವಾಮಿ ಕಾಲಿಗೆಬಿದ್ದ ಸಂಸದ ಪ್ರತಾಪ ಸಿಂಹ

ರಾಮನಗರ; ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ಬಿಡದಿಯ ಫಾರ್ಮ್‌ಹೌಸ್‌ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ಕುಮಾರಸ್ವಾಮಿಯವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. 

ಈ ಫೋಟೋಗಳನ್ನು ಸ್ವತಃ ಪ್ರತಾಪ ಸಿಂಹ ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ʻಕಷ್ಟಕಾಲದಲ್ಲಿ ಸತ್ಯಸಂಗತಿಯನ್ನು ಜನರ ಮುಂದಿಟ್ಟು ಬೆನ್ನಿಗೆ ನಿಂತ ಕುಮಾರಣ್ಣನಿಗೆ ಕುಮಾರಸ್ವಾಮಿಗೆ ಧನ್ಯವಾದ ತಿಳಿಸಿದೆʼ ಎಂದು ಬರೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. 2014ರಲ್ಲಿ ಪ್ರತಾಪ ಸಿಂಹ ಅವರು ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದಾಗ, ಜೆಡಿಎಸ್‌ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪರೋಕ್ಷವಾಗಿ ಪ್ರತಾಪ ಸಿಂಹ ಗೆಲುವಿಗೆ ಸಹಕರಿಸಿತ್ತು. ಇದೀಗ ಮತ್ತೆ ಪ್ರತಾಪ ಸಿಂಹ ಗೆಲ್ಲಬೇಕಾದರೆ ಜೆಡಿಎಸ್‌ ಹಾಗೂ ಕುಮಾರಸ್ವಾಮಿ ಬೆಂಬಲ ಅಗತ್ಯವಾಗಿದೆ.

ಸಿಎಂ ತವರು ಕ್ಷೇತ್ರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಗೆಲ್ಲಲು ಈ ಬಾರಿ ಕಾಂಗ್ರೆಸ್‌ ಸಾಕಷ್ಟು ಶ್ರಮಿಸುತ್ತಿದೆ. ಮುಖ್ಯಮಂತ್ರಿಗೆ ಇದು ಪ್ರತಿಷ್ಠೆ ಕೂಡಾ. ಮೂಲಗಳ ಪ್ರಕಾರ ಸಿಎಂ ಪುತ್ರ ಯತೀಂದ್ರ ಅವರೇ ಕಣಕ್ಕಿಳಿಯೋ ಸಾಧ್ಯತೆ ಇದೆ. ಹೀಗಾಗಿ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಪ್ರತಾಪ ಸಿಂಹ ಅವರಿಗೆ ಕುಮಾರಸ್ವಾಮಿಯವರ ಶ್ರೀರಕ್ಷೆ ಅತ್ಯಂತ ಅವಶ್ಯಕ.

ಇನ್ನು ಭೇಟಿ ವೇಳೆ ಪ್ರತಾಪ ಸಿಂಹ ಅವರಿಗೆ ಕುಮಾರಸ್ವಾಮಿಯವರು ಹಲವು ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

Share Post