BengaluruPolitics

ಹೈಕಮಾಂಡ್‌ ವಾರ್ನಿಂಗ್‌ಗೂ ಜಗ್ಗಲಿಲ್ಲ; ಸಿಎಂ, ಡಿಸಿಎಂ ವಿರುದ್ಧ ಕ್ರಮ ಕೈಗೊಳ್ಳಲು ಆಗುತ್ತಾ..?

ಬೆಂಗಳೂರು; ಇನ್ನೂ ಎರಡು ಮೂರು ದಿನವೂ ಆಗಿಲ್ಲ, ರಣದೀಪ್‌ ಸುರ್ಜೇವಾಲಾ ಹಾಗೂ ಕೆ.ಸಿ.ವೇಣುಗೋಪಾಲ್‌ ಬಂದುಹೋಗಿ… ಬೆಂಗಳೂರಿಗೆ ಬಂದಿದ್ದ ಈ ಇಬ್ಬರೂ ಕಾಂಗ್ರೆಸ್‌ ನಾಯಕರು ರಾಜ್ಯ ನಾಯಕರಿಗೆ ಕ್ಲಾಸ್‌ ತೆಗೆದುಕೊಂಡಿದ್ದರು.. ಯಾರೂ ಕೂಡಾ ಸಿಎಂ ಸ್ಥಾನದ ವಿಚಾರವಾಗಿ ಬಹಿರಂಗವಾಗಿ ಹೇಳಿಕೆ ಕೊಡಬಾರದು. ಹಾಗೇನಾದರೂ ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟು ಹೋಗಿದ್ದರು… ಆದ್ರೂ ಕೂಡಾ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನದ ವಿಚಾರ ಚರ್ಚೆಯಾಗುತ್ತಲೇ ಇದೆ.. ಬುಧವಾರ ಹೈಕಮಾಂಡ್‌ ನಾಯಕರು ಬಂದು ಎಚ್ಚರಿಕೆ ನೀಡಿ ಹೋದ ಬೆನ್ನಲ್ಲೇ ಮಾರನೇ ದಿನವೇ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದರು. ಸದ್ಯ ನಾನು ಸಿಎಂ ಆಗಿದ್ದೇನೆ. ನಾನೇ ಆ ಸ್ಥಾನದಲ್ಲಿ ಮುಂದುವರೆಯುತ್ತೇನೆ ಎಂದು ಬಹಿರಂಗ ಹೇಳಿಕೆ ಕೊಟ್ಟುಬಿಟ್ಟರು. ಈ ಮೂಲಕ ಹೈಕಮಾಂಡ್‌ ಎಚ್ಚರಿಕೆಗೆ ಮನ್ನಣೆಯೇ ಕೊಡಲಿಲ್ಲ.

ಇದಾದ ಮೇಲೆ ಇವತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಗದಗದಲ್ಲಿ ನಡೆಯುತ್ತಿದ್ದ ಕರ್ನಾಟಕ ಸಂಭ್ರಮ-೫೦ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಹುಬ್ಬಳ್ಳಿ ಮೂಲಕ ಹೋಗುತ್ತಿದ್ದ ಅವರನ್ನು ಹುಬ್ಬಳ್ಳಿಯಲ್ಲಿ ಅವರ ಬೆಂಬಲಿಗರು ಸ್ವಾಗತಿಸಿದರು. ಜೆಸಿಬಿ ಮೂಲಕ ಅವರ ಮೇಲೆ ಹೂವಿನ ಸುರಿಮಳೆಗೈದಿದ್ದಾರೆ. ಇದೇ ವೇಳೆ ಹಲವಾರು ಬೆಂಬಲಿಗರು ಮುಂದಿನ ಸಿಎಂ ಡಿ.ಕೆ.ಶಿವಕುಮಾರ್‌ಗೆ ಜೈ ಎಂದು ಕೂಗಿದರು. ಇದರಿಂದಾಗಿ ಡಿಸಿಎಂ ಕಡೆಯಿಂದಲೂ ಹೈಕಮಾಂಡ್‌ ಆಜ್ಞೆ ಉಲ್ಲಂಘನೆಯಾಯಿತು. ಇನ್ನೊಂದಡೆ ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಹಾಗೂ ಡಿಸಿಎಂ ಜೊತೆಗೇ ಕೂತಿದ್ದರು. ಅಕ್ಕ-ಪಕ್ಕವೇ ಇದ್ದರೂ ಇಬ್ಬರೂ ಸುಮಾರು ಹದಿನೈದು ನಿಮಿಷಗಳ ಕಾಲ ಇಬ್ಬರೂ ಮಾತನಾಡಲೇ ಇಲ್ಲ. ಇಬ್ಬರು ಬೇರೆ ಬೇರೆ ಕಡೆ ಮುಖ ತಿರುಗಿಸಿಕೊಂಡು ಕೂತಿದ್ದರು. ಅಷ್ಟೇ ಏಕೆ, ವೇದಿಕೆ ಮೇಲೆ ಭಾಷಣ ಶುರು ಮಾಡಿದ ಸಿಎಂ ಸಿದ್ದರಾಮಯ್ಯ, ವೇದಿಕೆ ಮೇಲಿದ್ದ ಸಚಿವರು, ಶಾಸಕರು, ಗಣ್ಯರ ಹೆಸರುಗಳನ್ನೆಲ್ಲಾ ಹೇಳಿದರು. ಆದ್ರೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೆಸರು ಹೇಳಲಿಲ್ಲ. ಇದರಿಂದಾಗಿ ಯಾರೋ ಒಬ್ಬರು ಡಿ.ಕೆ.ಶಿವಕುಮಾರ್‌ ಅವರು ಹೆಸರು ಹೇಳಲಿಲ್ಲ ಎಂದು ಕೂಗಿ ಹೇಳಿದರು. ಆಗ ಜ್ಞಾಪಿಸಿಕೊಂಡ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹೆಸರು ಮರೆತಿದ್ದೇನೆ ಎಂದರು.

ಹೀಗಿರುವಾಗಲೇ ಸಚಿವ ಪ್ರಿಯಾಂಕ್‌ ಖರ್ಗೆ ಕೂಡಾ ಮೈಸೂರಿನಲ್ಲಿ ಮುಖ್ಯಮಂತ್ರಿ ಹುದ್ದೆ ಬಗ್ಗೆ ಮಾತನಾಡಿದರು. ಹೈಕಮಾಂಡ್‌ ಸೂಚನೆ ಕೊಟ್ಟರೆ ನಾನು ಕೂಡಾ ಮುಖ್ಯಮಂತ್ರಿ ಸ್ಥಾನ ಅಲಂಕರಿಸೋದಕ್ಕೆ ಸಿದ್ಧನಿದ್ದೇನೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಐದು ವರ್ಷ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್‌ ಖರ್ಗೆ, ಅದು ಸಿದ್ದರಾಮಯ್ಯ ಅವರ ವೈಯಕ್ತಿಕ ಹೇಳಿಕೆ. ಯಾರು ಸಿಎಂ ಆಗಬೇಕು, ಯಾರು ಮುಂದುವರೆಯಬೇಕು ಅನ್ನೋದನ್ನ ಹೈಕಮಾಂಡ್‌ ತೀರ್ಮಾನ ಮಾಡುತ್ತೆ ಎಂದಿದ್ದಾರೆ.

ಇನ್ನೊಂದಡೆ ತುಮಕೂರಿನಲ್ಲಿ ಸಚಿವ ಕೆ.ಎನ್‌.ರಾಜಣ್ಣ ಕೂಡಾ ಇದಕ್ಕೊಂದು ಟ್ವಿಸ್ಟ್‌ ಕೊಟ್ಟಿದ್ದಾರೆ. ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರು ಹೊರತುಪಡಿಸಿದರೆ ಗೃಹ ಸಚಿವ ಜಿ.ಪರಮೇಶ್ವರ್‌ ಅವರೇ ಸಿಎಂ ಆಗಬೇಕು ಎಂದಿದ್ದಾರೆ. ಪರಮೇಶ್ವರ್‌ ಅವರು ಹೋಮ್‌ ಮಿನಿಸ್ಟರ್‌ ಇದ್ದಾರೆ. ಸಿಎಂ ಆಗುವ ಅವಕಾಶ ಅವರಿಗಿದೆ. ಮುಂದೆ ಏನು ಬೇಕಾದರೂ ಆಗಬಹುದು ಎಂದು ಕೆ.ಎನ್‌.ರಾಜಣ್ಣ ಹೇಳಿದರು. ವೇದಿಕೆಯಲ್ಲಿ ಪರಮೇಶ್ವರ್‌ ಕೂಡಾ ಇದ್ದಿದ್ದರಿಂದ ಕೆ.ಎನ್‌.ರಾಜಣ್ಣ ಅವರು ಪರಮೇಶ್ವರ್‌ ಪರ ಬ್ಯಾಟ್‌ ಬೀಸಿದರು. ಸಿದ್ದರಾಮಯ್ಯ ಅವರು ಇರೋವರೆಗೂ ನಾನು ಮತ್ತು ಪರಮೇಶ್ವರ್‌ ಸಿದ್ದರಾಮಯ್ಯ ಪರ ಇರುತ್ತೇವೆ. ಸಿದ್ದರಾಮಯ್ಯ ಅವರು ಹೊರತುಪಡಿಸಿದರೆ ಪರಮೇಶ್ವರ್‌ ಸಿಎಂ ಆಗಲಿ ಎಂದು ಹೇಳಿದರು. ಏನೂ ಮಾತನಾಡಬಾರದು ಎಂದು ಹೈಕಮಾಂಡ್‌ ಹೇಳಿದೆ. ಆದ್ರೆ ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಹೆದರೋದಿಲ್ಲ ಎನ್ನುವ ಮೂಲಕ ರಾಜಣ್ಣ ಸಂದೇಶವೊಂದರನ್ನು ರವಾನಿಸಿದ್ದಾರೆ.

ಇದೆಲ್ಲವೂ ನೋಡ್ತಾ ಇದ್ರೆ, ಹೈಕಮಾಂಡ್‌ ಎಷ್ಟೇ ಪ್ರಯತ್ನ ಪಟ್ಟರೂ ಬಣ ರಾಜಕೀಯ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಒಂದು ಕಡೆ ಡಿ.ಕೆ.ಶಿವಕುಮಾರ್‌ ಅವರು ಎರಡೂ ವರ್ಷದ ನಂತರ ಸಿಎಂ ಆಗಬೇಕು ಅನ್ನೋದು ಕೂಗು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರಬೇಕು ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಹೈಕಮಾಂಡ್‌ ಬಹಿರಂಗ ಹೇಳಿಕೆ ನೀಡಿದರೆ ಕ್ರಮ ಎಂದು ಹೇಳಿದೆ. ಆದ್ರೆ ಈಗ ಸಿಎಂ ಅವರೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ತನ್ನ ಬೆಂಬಲಿಗರು ಬಹಿರಂಗವಾಗಿ ಕೂಗುತ್ತಿದ್ದರೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಏನೂ ಮಾತನಾಡಿಲ್ಲ. ಹೀಗಾಗಿ, ಈ ಇಬ್ಬರು ನಾಯಕರ ಮೇಲೆ ಹೈಕಮಾಂಡ್‌ ಕ್ರಮ ಕೈಗೊಳ್ಳೋದಕ್ಕೆ ಆಗಲ್ಲ. ಅಂದ್ರೆ ರಾಜ್ಯ ಕಾಂಗ್ರೆಸ್‌ ಕಿತ್ತಾಟ ಹೈಕಮಾಂಡ್‌ ಅನ್ನೂ ಲೆಕ್ಕಸದ ಹಂತದ ಹೋಗಿದೆ ಅಂತಾನೇ ಲೆಕ್ಕ…

Share Post