ರಾಜ್ಯದಲ್ಲಿ ವಿದ್ಯುತ್ ಅಭಾವಕ್ಕೆ ಬಿಜೆಪಿಯೇ ಕಾರಣ; ಕೆ.ಜೆ.ಜಾರ್ಜ್ ಆರೋಪ
ನವದೆಹಲಿ; ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ಲೋಡ್‌ಶೆಡ್ಡಿಂಗ್ ನಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಈ ನಡುವೆ ದೆಹಲಿಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಈ ಮಟ್ಟದ ವಿದ್ಯುತ್ ಅಭಾವ ಆಗೋದಕ್ಕೆ ಬಿಜೆಪಿಯೇ ಕಾರಣ ಎಂದು ಆರೋಪ ಮಾಡಿದ್ದಾರೆ.
ನಾವು ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ನಾಲ್ಕು ವರ್ಷ ಅಧಿಕಾರ ನಡೆಸಿತ್ತು. ಈ ಅವಧಿಯಲ್ಲಿ ವಿದ್ಯುತ್ ಸಂಗ್ರಹಕ್ಕೆ ಪ್ರಯತ್ನ ಮಾಡಿರಲಿಲ್ಲ. ಅಂದು ಅವರು ವಿದ್ಯುತ್ ಸಂಗ್ರಹ ಮಾಡದೇ ಇದ್ದುದರ ಪರಿಣಾಮವೇ ಈಗ ವಿದ್ಯುತ್ ಕೊರತೆಯಾಗೋದಕ್ಕೆ ಕಾರಣ ಎಂದು ಜಾರ್ಜ್ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದೆ. ಜೊತೆಗೆ ಗಾಳಿಯೂ ಸರಿಯಾದ ಬೀಸದ ಕಾರಣ ವಿಂಡ್ ಎನರ್ಜಿ ಕೂಡಾ ಉತ್ಪಾದನೆಯಾಗುತ್ತಿಲ್ಲ. ರಾಜ್ಯಕ್ಕೆ 16000 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ಸದ್ಯ ರಾಜ್ಯದಲ್ಲಿ 1500 ಮೆಗಾ ವ್ಯಾಟ್ ಕೊರತೆಯಾಗಿದೆ ಎಂದು ಜಾರ್ಜ್ ವಿವರಿಸಿದ್ದಾರೆ.