ಟಿವಿ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು ತಪ್ಪೇನಿಲ್ಲ; ಶಾಸಕ ಪ್ರದೀಪ್ ಈಶ್ವರ್
ಬೆಂಗಳೂರು; ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭಾನುವಾರ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಶಾಸಕರೊಬ್ಬರು ಬಿಗ್ಬಾಸ್ ಸ್ಪರ್ಧಿಯಾಗಿ ಹೋಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಬರಗಾಲವಿದೆ. ಸ್ವಕ್ಷೇತ್ರ ಚಿಕ್ಕಬಳ್ಳಾಪುರದಲ್ಲೂ ಬರಗಾಲವಿದೆ. ಇಂತಹ ಪರಿಸ್ಥಿತಿಯಲ್ಲಿ ಜನರೊಂದಿಗೆ ಇರೋದು ಬಿಟ್ಟು ಬಿಗ್ಬಾಸ್ಗೆ ಹೋಗಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಪ್ರದೀಪ್ ಈಶ್ವರ್ ಅವರು ಬಿಗ್ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಜೊತೆಗೆ ಬಿಗ್ಬಾಸ್ಗೆ ಹೋಗಿದ್ದರ ಬಗ್ಗೆ ಸಮಜಾಯಿಷಿಯನ್ನೂ ನೀಡಿದ್ದಾರೆ.
ನಾನು ಬಿಗ್ಬಾಸ್ ಮನೆಯಲ್ಲಿ ಕೇವಲ ಎರಡು ಮೂರು ಗಂಟೆ ಮಾತ್ರ ಇದ್ದು ಬಂದಿದ್ದೇವೆ. ನನ್ನ ಹಾಗೂ ವಾಹಿನಿ ನಡುವೆ ಆಗಿದ್ದ ಒಪ್ಪಂದ ಇಷ್ಟೇ. ಸ್ಪರ್ಧಿಗಳನ್ನು ಉತ್ತೇಜಿಸಲು ಹಾಗೂ ಸ್ಫೂರ್ತಿದಾಯಕ ಮಾತುಗಳನ್ನಾಡಲು ನನ್ನನ್ನು ಆಹ್ವಾನಿಸಲಾಗಿತ್ತು. ನಾನು ಎರಡು ಮೂರು ಗಂಟೆ ಇದ್ದು ಬಂದಿದ್ದೇನೆ. ನೂರು ದಿನ ಇದ್ದಿದ್ದರೆ ಕೇಳಬಹುದು. ಎರಡು ಮೂರು ತಾಸು ವಾಹಿನಿಗಳ ಕಾರ್ಯಕ್ರಮದಲ್ಲಿ ಭಾಗಿಯಾದರೆ ತಪ್ಪೇನಿಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಇದನ್ನು ಯಾಕೆ ವಿವಾದ ಮಾಡುತ್ತಿದ್ದಾರೋ ನನಗೆ ಗೊತ್ತಾಗುತ್ತಿಲ್ಲ ಎಂದಿರುವ ಪ್ರದೀಪ್ ಈಶ್ವರ್, ನಾನು ಡಾ.ರಾಜ್ ಕುಮಾರ್ ಅವರ ಅಭಿಮಾನಿ. ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ನೃತ್ಯ ಮಾಡಿದ್ದೇನೆ. ಡಾನ್ಸ್ ಮಾಡಿದ್ದರಲ್ಲಿ ಕೂಡಾ ಯಾವುದೇ ತಪ್ಪಿಲ್ಲ ಅಂತ ನನಗನಿಸುತ್ತೆ ಎಂದಿದ್ದಾರೆ.