ಗೋವಿಂದ ಬಾಬು ಪೂಜಾರಿಗೆ ವಂಚನೆ ಪ್ರಕರಣ; ಕೊನೆಗೂ ಹಾಲಶ್ರೀ ಅರೆಸ್ಟ್
ಬೆಂಗಳೂರು; ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಐದು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿಯನ್ನು ಬಂಧಿಸಲಾಗಿದೆ. ಪ್ರಕರಣ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ಹಾಲಶ್ರೀ ಸ್ವಾಮೀಜಿ ತಲೆ ಮರೆಸಿಕೊಂಡಿದ್ದರು. ಹಲವು ದಿನಗಳಿಂದ ಎಷ್ಟು ಹುಡುಕಾಡಿದರೂ ಅವರು ಸಿಕ್ಕಿರಲಿಲ್ಲ. ಇದೀಗ ಸಿಸಿಬಿ ಅಧಿಕಾರಿಗಳು ಒಡಿಶಾದ ಕಟಕ್‌ನಲ್ಲಿ ಅವರನ್ನು ಬಂಧಿಸಿದ್ದಾರೆ.
ಹಾಲಶ್ರೀ ಸ್ವಾಮೀಜಿಯವರು ರೈಲಿನಲ್ಲಿ ಭುವನೇಶ್ವರದಿಂದ ಬೋಧ್ ಗಯಾಗೆ ತೆರಳುತ್ತಿದ್ದರು. ಈ ಮಾಹಿತಿ ಅರಿತ ಸಿಸಿಬಿ ಪೊಲೀಸರು ಕಟಕ್ ಬಳಿ ರೈಲಿನಲ್ಲಿದ್ದ ಹಾಲಶ್ರೀ ಸ್ವಾಮೀಜಿಯನ್ನು ಬಂಧಿಸಿದ್ದಾರೆ. ಒಡಿಶಾ ಪೊಲೀಸರ ಸಹಕಾರದೊಂದಿಗೆ ಶ್ರೀಗಳ ಬಂಧನ ಮಾಡಲಾಗಿದ್ದು, ಇಂದು ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತದೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಟೀಂ ಐದು ಕೋಟಿ ರೂಪಾಯಿ ಪಡೆದು ವಂಚನೆ ಮಾಡಿತ್ತು. ಇದರಲ್ಲಿ ಹಾಲಶ್ರೀ ಸ್ವಾಮೀಜಿಗೆ ಕೂಡಾ ಒಂದೂವರೆ ಕೋಟಿ ರೂಪಾಯಿ ನೀಡಲಾಗಿತ್ತು. ಆದ್ರೆ ಸ್ವಾಮೀಜಿ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದರು.
ಹೈದರಾಬಾದ್‌ನಲ್ಲಿ ಹಾಲಶ್ರೀ ಇದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರು ಹೈದರಾಬಾದ್‌ಗೆ ನಿನ್ನೆ ತೆರಳಿದ್ದರು. ಆದ್ರೆ ಹಾಲಶ್ರೀ ರೈಲಿನಲ್ಲಿ ತೆರಳುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಕೂಡಲೇ ಅವರು ಕಾರ್ಯಪ್ರವೃತ್ತರಾಗಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಸ್ವಾಮೀಜಿ ಬಂದನವಾದರೆ ದೊಡ್ಡವರ ಹೆಸರುಗಳೆಲ್ಲಾ ಹೊರಬರುತ್ತವೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಳು. ಹೀಗಾಗಿ ಈಗ ಸ್ವಾಮೀಜಿ ಬಂಧನವಾಗಿದೆ. ಅವರು ಯಾವ ಹೆಸರುಗಳನ್ನು ಹೇಳಲಿದ್ದಾರೆ ಎಂಬುದರ ಬಗ್ಗೆ ಕುತೂಹಲಕ್ಕೆ ಕಾರಣವಾಗಿದೆ.