ಪೋಕ್ಸೋ ಪ್ರಕರಣ; ಡಿವೈಎಸ್‌ಪಿ ಕಚೇರಿಯಲ್ಲಿ ಮುರುಘಾ ಶ್ರೀಗಳ ವಿಚಾರಣೆ
ಚಿತ್ರದುರ್ಗ; ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಡಿವೈಎಸ್‌ಪಿ ಕಚೇರಿಯಲ್ಲಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿ, ಆರೋಪದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ನಿನ್ನೆ ಮೂರು ದಿನಗಳ ಕಾಲ ಶ್ರೀಗಳನ್ನು ಪೊಲೀಸ್ ವಶಕ್ಕೆ ನೀಡಲಾಗಿತ್ತು. ವಶಕ್ಕೆ ಪಡೆದ ತನಿಖಾ ತಂಡ, ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಶ್ರೀಗಳನ್ನು ಡಿವೈಎಸ್‌ಪಿ ಕಚೇರಿಗೆ ಕರೆದುಕೊಂಡು ಬಂದಿತ್ತು. ನಿನ್ನೆ ಮಧ್ಯರಾತ್ರಿಯವರೆಗೂ ಶರಣರನ್ನು ವಿಚಾರಣೆ ನಡೆಲಸಾಯಿತು. ವಿಚಾರಣೆ ಬಳಿಕ ಮುರುಘಾ ಶ್ರೀಗಳು ರಾತ್ರಿ ಅಲ್ಲೇ ಮಲಗಿದ್ದರು. ಇಂದು ಬೆಳಗ್ಗೆಯಿಂದ ಮತ್ತೆ ವಿಚಾರಣೆ ನಡೆಯುತ್ತಿದೆ. ತನಿಖಾಧಿಕಾರಿ ಅನಿಲ್ ಕುಮಾರ್ ನೇತೃತ್ವದಲ್ಲಿ ಶ್ರೀಗಳನ್ನು ಪ್ರಶ್ನಿಸಲಾಗುತ್ತಿದೆ. ವಿಚಾರಣೆಗೆ ಶರಣರು ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಡಿವೈಎಸ್‌ಪಿ ಕಚೇರಿ ಸುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಡಿವೈಎಸ್‌ಪಿ ಕಚೇರಿ ಪಕ್ಕದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರು ಭೇಟಿ ನೀಡಲು ಸಮಸ್ಯೆ ಆಗಿದೆ.