National

ಹಳೆಯ ಸಂಸತ್‌ ಕಟ್ಟಡ ಇತಿಹಾಸವೇನು..?; ಈಗ ಅದನ್ನು ಏನು ಮಾಡ್ತಾರೆ..?

ನವದೆಹಲಿ; ಇಂದಿನಿಂದ ಹೊಸ ಸಂಸತ್‌ ಭವನದಲ್ಲಿ ವಿಶೇಷ ಅಧಿವೇಶನ ನಡೆಸಲಾಗುತ್ತಿದೆ. ಇನ್ನು ಮುಂದೆ ಹಳೆಯ ಕಟ್ಟಡದಲ್ಲಿ ಯಾವುದೇ ಅಧಿವೇಶನ ನಡೆಯೋದಿಲ್ಲ. ಅಂದಹಾಗೆ ಹಳೆಯ ಕಟ್ಟಡಕ್ಕೆ ನೂರು ವರ್ಷಗಳ ಇತಿಹಾಸವಿದೆ. ಹಾಗಾದರೆ ಇದನ್ನು ಕಟ್ಟಿದ್ದು ಯಾರು..? ಇದಕ್ಕೆ ಎಷ್ಟು ಖರ್ಚಾಗಿತ್ತು..? ಯಾಕೆ ಈಗ ಹೊಸ ಕಟ್ಟಡ ಕಟ್ಟಲಾಗಿದೆ..? ಈ ಹಲೆಯ ಕಟ್ಟಡವನ್ನು ಏನು ಮಾಡುತ್ತಾರೆ..? ಇದೆಲ್ಲದಕ್ಕೂ ಉತ್ತರ ಹುಡುಕೋಣ ಬನ್ನಿ… 

ಹಳೆಯ ಪಾರ್ಲಿಮೆಂಟ್ ಹೌಸ್ ಅನ್ನು ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ಅವರು ‘ಕೌನ್ಸಿಲ್ ಹೌಸ್’ ಎಂದು ವಿನ್ಯಾಸಗೊಳಿಸಿದರು. ಇದನ್ನು ನಿರ್ಮಿಸಲು ಆರು ವರ್ಷಗಳು (1921-1927) ತೆಗೆದುಕೊಂಡಿತು. ಆಗ ಬ್ರಿಟಿಷ್ ಸರ್ಕಾರದ ಲೆಜಿಸ್ಲೇಟಿವ್ ಕೌನ್ಸಿಲ್ ಈ ಕಟ್ಟಡದಲ್ಲಿ ಕೆಲಸ ಮಾಡುತ್ತಿತ್ತು.

ಆಗ ಇದರ ನಿರ್ಮಾಣಕ್ಕೆ  83 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಭಾರತದ ಸ್ವಾತಂತ್ರ್ಯದ ನಂತರ, ‘ಕೌನ್ಸಿಲ್ ಹೌಸ್’ ಅನ್ನು ಸಂಸತ್ ಭವನವಾಗಿ ಪರಿವರ್ತಿಸಲಾಯಿತು. ನೂತನ ಸಂಸತ್ ಭವನ ಲಭ್ಯವಾಗಲಿರುವ ಹಿನ್ನೆಲೆಯಲ್ಲಿ ಹಳೆಯ ಸಂಸತ್ ಭವನವನ್ನು ಸಂಸತ್ತಿನ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಹಳೆಯ ಕಟ್ಟಡದಲ್ಲಿ ಆಸನಗಳ ಕೊರತೆ

ಪ್ರಸ್ತುತ ಲೋಕಸಭೆಯಲ್ಲಿ 545 ಸ್ಥಾನಗಳಿವೆ. 1971 ರ ಜನಗಣತಿಯ ಆಧಾರದ ಮೇಲೆ ಡಿಲಿಮಿಟೇಶನ್ ನಂತರ ಈ ಸ್ಥಾನಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಂಸದ ಸ್ಥಾನಗಳ ಸಂಖ್ಯೆ 2026 ರವರೆಗೂ ಇಷ್ಟೇ ಇರುತ್ತದೆ. ಅನಂತರ ಕ್ಷೇತ್ರಗಳ ಮರುವಿಂಗಡಣೆಯಾಗಿ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗಲಿದೆ. ಆಗ ಹೆಚ್ಚಾದ ಸಂಸದರು ಕೂರಲು ಜಾಗವಿರೋದಿಲ್ಲ. ಹೀಗಾಗಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ.

 ಹಳೆಯ ಕಟ್ಟದಲ್ಲಿ ಮೂಲಸೌಕರ್ಯ ಕೊರತೆ

ಹಳೆಯ ಸಂಸತ್‌ ಭವನವನ್ನು ಸ್ವಾಂತ್ರ್ಯ ಪೂರ್ವದಲ್ಲಿ ನಿರ್ಮಾಣ ಮಾಡಲಾಗಿದೆ. ಆಗ ಸರಿಯಾಗಿ ಒಳಚರಂಡಿ ವ್ಯವಸ್ಥೆ, ಹವಾನಿಯಂತ್ರಿತ ವ್ಯವಸ್ಥೆ ಮಾಡಿರಲಿಲ್ಲ. ಅಗ್ನಿಶಾಮಕ, ಸಿಸಿಟಿವಿ, ಆಡಿಯೋ, ವಿಡಿಯೋ ವ್ಯವಸ್ಥೆಗಳನ್ನೂ ಮಾಡಿರಲಿಲ್ಲ. ಕಾಲಾಂತರದಲ್ಲಿ ಆವೆಲ್ಲಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಬರಲಾಯಿತು.  ಇನ್ನು ಕಟ್ಟಡದಲ್ಲಿ ತೇವಾಂಶದಂತಹ ಸಮಸ್ಯೆಗಳು ಹೆಚ್ಚಾದವು ಮತ್ತು ಬೆಂಕಿ ಅವಘಡಗಳು ಹೆಚ್ಚಾಯಿತು. ಹೀಗಾಗಿ ಹೊಸ ಕಟ್ಟಡ ಅನಿವಾರ್ಯವಾಯಿತು.

ಸುರಕ್ಷತೆ

ಸುಮಾರು 100 ವರ್ಷಗಳ ಹಿಂದೆ ಸಂಸತ್ ಭವನವನ್ನು ನಿರ್ಮಿಸಿದಾಗ ದೆಹಲಿ ಭೂಕಂಪನ ವಲಯ-2 ರಲ್ಲಿತ್ತು, ಆದರೆ ಈಗ ಅದು ನಾಲ್ಕಕ್ಕೆ ತಲುಪಿದೆ. ಈ ಕಾರಣದಿಂದಾಗಿಯೂ ಹೊಸ ಕಟ್ಟಡ ನಿರ್ಮಾಣ ಮಾಡಬೇಕಾಯಿತು.

ಉದ್ಯೋಗಿಗಳಿಗೆ ಕಡಿಮೆ ಸ್ಥಳಾವಕಾಶ

ಸಂಸದರನ್ನು ಹೊರತುಪಡಿಸಿ ನೂರಾರು ನೌಕರರು ಸಂಸತ್ತಿನಲ್ಲಿ ಕೆಲಸ ಮಾಡುತ್ತಾರೆ. ಸಂಸತ್ತಿನಲ್ಲೂ ಜನಸಂದಣಿ ಹೆಚ್ಚಿದೆ.

ಹೊಸ ಸಂಸತ್ ಭವನವನ್ನು ನಿರ್ಮಿಸಿದವರು ಯಾರು?
ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಹೊಸ ಕಟ್ಟಡದ ನಿರ್ಮಾಣ ಮಾಡಿದೆ. ಸೆಪ್ಟೆಂಬರ್ 2020 ರಲ್ಲಿ ಬಿಡ್ಡಿಂಗ್ ಮೂಲಕ 861.90 ಕೋಟಿ ರೂಪಾಯಿಗೆ ಗುತ್ತಿಗೆ ಪಡೆದುಕೊಂಡಿತ್ತು.

ಹೊಸ ಸಂಸತ್ ಕಟ್ಟಡವು ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿದೆ. ಈ ಯೋಜನೆಯ ನೀಲನಕ್ಷೆಯನ್ನು ಗುಜರಾತ್‌ನ ಆರ್ಕಿಟೆಕ್ಚರ್ ಸಂಸ್ಥೆಯಾದ ಎಚ್‌ಸಿಪಿ ಡಿಸೈನ್ಸ್ ಸಿದ್ಧಪಡಿಸಿದೆ. ಅಕ್ಟೋಬರ್ 2019 ರಲ್ಲಿ, ಕೇಂದ್ರ ಲೋಕೋಪಯೋಗಿ ಇಲಾಖೆ ಸಂಸತ್ತು, ಸಾಮಾನ್ಯ ಕೇಂದ್ರ ಸಚಿವಾಲಯ, ಕೇಂದ್ರ ವಿಸ್ತಾಗಳ ಅಭಿವೃದ್ಧಿ ಇತ್ಯಾದಿಗಳ ಸಲಹಾ ಕಾರ್ಯವನ್ನು HCP ವಿನ್ಯಾಸಕ್ಕೆ ವಹಿಸಿಕೊಟ್ಟಿತು.

ಕಂಪನಿಯು ಸೆಂಟ್ರಲ್ ವಿಸ್ತಾ ಪ್ರದೇಶದ ಮಾಸ್ಟರ್ ಪ್ಲಾನ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಹೊಸ ಅವಶ್ಯಕತೆಗಳನ್ನು ಪೂರೈಸಲು ಕಟ್ಟಡಗಳ ವಿನ್ಯಾಸ ಮಾಡಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಿಪಿಡಬ್ಲ್ಯೂಡಿ ಕನ್ಸಲ್ಟೆನ್ಸಿಗೆ ಟೆಂಡರ್ ಆಹ್ವಾನಿಸಿತ್ತು. 229.75 ಕೋಟಿಗಳನ್ನು ವೆಚ್ಚವಾಗಿ ನಿಗದಿಪಡಿಸಲಾಗಿದೆ. HCP ವಿನ್ಯಾಸ ಬಿಡ್ ಗೆದ್ದಿದೆ.

ಎಚ್‌ಸಿಪಿ ಡಿಸೈನ್ ಕಂಪನಿಯು ಗಾಂಧಿನಗರದಲ್ಲಿ ಸೆಂಟ್ರಲ್ ವಿಸ್ಟಾ, ರಾಜ್ಯ ಸಚಿವಾಲಯ, ಅಹಮದಾಬಾದ್‌ನಲ್ಲಿ ಸಬರಮತಿ ರಿವರ್‌ಫ್ರಂಟ್ ಡೆವಲಪ್‌ಮೆಂಟ್, ಮುಂಬೈ ಪೋರ್ಟ್ ಕಾಂಪ್ಲೆಕ್ಸ್, ವಾರಣಾಸಿಯ ಮಂದಿರ ಕಾಂಪ್ಲೆಕ್ಸ್, ಗುಜರಾತ್‌ನ ಐಐಎಂ ಅಹಮದಾಬಾದ್ ಹೊಸ ಕ್ಯಾಂಪಸ್ ಅಭಿವೃದ್ಧಿಯಂತಹ ಯೋಜನೆಗಳಲ್ಲಿ ಅನುಭವವನ್ನು ಹೊಂದಿದೆ.

ಪ್ರಸ್ತುತ ಸಂಸತ್ತಿನ ಕಟ್ಟಡವು ಸುಮಾರು 100 ವರ್ಷಗಳಷ್ಟು ಹಳೆಯದು. ಸಂಸತ್ ಭವನದಲ್ಲಿ ಸಂಸದರಿಗೆ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

 

Share Post