International

ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಪ್ರಕರಣ; ಭಾರತಕ್ಕೂ ಈ ಕೊಲೆಗೂ ಸಂಬಂಧವೇನು..?

ನವದೆಹಲಿ; ಭಾರತ ಹಾಗೂ ಕೆನಡಾ ನಡುವಿನ ಸಂಬಂಧಗಳು ಮತ್ತಷ್ಟು ಹೆದಗೆಟ್ಟಿವೆ. ಜೂನ್‌ 18 ರಂದು ಕೆನಡಾದ ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದಲ್ಲಿ ಖಲಿಸ್ತಾನಿ ಉಗ್ರ ಹರ್ದಿಪ್‌ ಸಿಂಗ್‌ ಅವರ ಹತ್ಯೆಯಾಗಿತ್ತು. ಇದರ ಹಿಂದೆ ಭಾರತದ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ. ಕೆನಡಾ ಪ್ರಧಾನಿಯೇ ಈ ಬಗ್ಗೆ ಆರೋಪ ಮಾಡಿದ್ದಾರೆ. 

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜೂನ್ 18 ರಂದು, ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸಿಖ್ ದೇವಾಲಯದ ಬಳಿ ಹರ್ದೀಪ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.  ಈ ಹತ್ಯೆಯಲ್ಲಿ ಭಾರತದ ಕೈವಾಡದ ಬಗ್ಗೆ ನಮ್ಮ ಗುಪ್ತಚರರು ಪ್ರಬಲ ಸಾಕ್ಷ್ಯ ಸಂಗ್ರಹಿಸಿದ್ದಾರೆ ಎಂದು ಟ್ರೂಡೊ ಬಹಿರಂಗ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಜಿ20 ಶೃಂಗಸಭೆಯಲ್ಲೂ ಟ್ರುಡೊ ಈ ವಿಷಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಬಳಿ ಪ್ರಸ್ತಾಪ ಮಾಡಿದ್ದರು. ವಿದೇಶಿ ಪಡೆಗಳು ಕೆನಡಾದ ನೆಲದಲ್ಲಿ ಕೆನಡಾದ ಪ್ರಜೆಯನ್ನು ಕೊಂದಿರುವುದು ನಮ್ಮ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಟ್ರೂಡೊ ಹೌಸ್ ಆಫ್ ಕಾಮನ್ಸ್‌ನಲ್ಲಿ ಹೇಳಿದ್ದಾರೆ.

“ಇದು ಮುಕ್ತ ಮತ್ತು ಪ್ರಜಾಪ್ರಭುತ್ವ ಸಮಾಜಗಳ ಮೂಲ ನಿಯಮಗಳಿಗೆ ವಿರುದ್ಧವಾಗಿದೆ” ಎಂದು ಟ್ರೂಡೊ ಆರೋಪಿಸಿದ್ದಾರೆ. ಆದರೆ, ಕೆನಡಾ ಪ್ರಧಾನಿ ಮತ್ತು ವಿದೇಶಾಂಗ ಸಚಿವರ ಆರೋಪಗಳನ್ನು ಭಾರತ ಸರ್ಕಾರ ತಳ್ಳಿಹಾಕಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಕಾಮೆಂಟ್‌ಗಳು ಉದ್ದೇಶಪೂರ್ವಕವಾಗಿದೆ, ಜೊತೆಗೆ ಆಧಾರರಹಿತವಾಗಿವೆ ಎಂದು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಕೆನಡಾದಲ್ಲಿ ಕೊಲೆ, ಮಾನವ ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧದಂತಹ ಚಟುವಟಿಕೆಗಳನ್ನು ಅನುಮತಿಸುವುದು ಹೊಸದೇನಲ್ಲ. ಭಾರತ ಸರ್ಕಾರವು ಇಂತಹ ಚಟುವಟಿಕೆಗಳಲ್ಲಿ ತೊಡಗಿದೆ ಎಂಬ ಆರೋಪಗಳನ್ನು ನಾವು ಒಪ್ಪುವುದಿಲ್ಲ. ಕೆನಡಾದ ಭೂಪ್ರದೇಶದಿಂದ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ವಿರುದ್ಧ ಪರಿಣಾಮಕಾರಿ ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ಬಾಗ್ಚಿ  ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಭಾರತೀಯ ರಾಜತಾಂತ್ರಿಕ ಪವನ್ ಕುಮಾರ್ ರಾಯ್ ಉಚ್ಚಾಟನೆ
ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಮಾತನಾಡಿ, ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಸೋಮವಾರ ಭಾರತದ ಡೆಪ್ಯುಟಿ ಹೈಕಮಿಷನರ್ ಪವನ್ ಕುಮಾರ್ ರಾಯ್ ಅವರನ್ನು ನಮ್ಮ ಸರ್ಕಾರ ಉಚ್ಛಾಟನೆ ಮಾಡಿದೆ ಎಂದು ಹೇಳಿದ್ದಾರೆ.  ಇದಕ್ಕೂ ಮುನ್ನ ನಿಜ್ಜರ ಹತ್ಯೆಯನ್ನು ‘ಉದ್ದೇಶಿತ ಘಟನೆ’ ಎಂದು ತನಿಖೆ ನಡೆಸಿದ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು.

ಬ್ರಿಟಿಷ್ ಕೊಲಂಬಿಯಾದಲ್ಲಿ ಏನಾಯಿತು?
ವ್ಯಾಂಕೋವರ್‌ನಿಂದ ಪೂರ್ವಕ್ಕೆ 30 ಕಿಮೀ ದೂರದಲ್ಲಿರುವ ಸರ್ರೆಯ ಗುರುನಾನಕ್ ಸಿಖ್ ಗುರುದ್ವಾರದ ಬಳಿ ಪಾರ್ಕಿಂಗ್ ಸ್ಥಳದಲ್ಲಿ ವಾಹನದಲ್ಲಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಮುಖವಾಡಧಾರಿಗಳು ಗುಂಡಿಕ್ಕಿ ಕೊಂದರು.

ನಿಜ್ಜರ್ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಪ್ರಮುಖ ಸಿಖ್ ನಾಯಕರಾಗಿದ್ದರು. ಅವರು ಪಂಜಾಬ್ ಅನ್ನು ಸ್ವತಂತ್ರ ಸಿಖ್ ರಾಜ್ಯವನ್ನಾಗಿ ಮಾಡುವ ಖಲಿಸ್ತಾನ್ ಚಳವಳಿಯ ಬೆಂಬಲಿಗರಾಗಿದ್ದರು. ಇದರಿಂದಾಗಿ ಅವರಿಗೆ ಹಲವು ಬೆದರಿಕೆಗಳು ಬಂದಿವೆ ಎನ್ನುತ್ತಾರೆ ಅವರ ಅನುಯಾಯಿಗಳು.

ಭಾರತ ಸರ್ಕಾರವು ನಿಜ್ಜರ್ ಅವರನ್ನು ಪ್ರತ್ಯೇಕತಾವಾದವನ್ನು ಉತ್ತೇಜಿಸುವ ನಾಯಕ ಎಂದು ಬಣ್ಣಿಸಿದರೆ, ಅವರ ಬೆಂಬಲಿಗರು ಈ ಆರೋಪಗಳನ್ನು ಆಧಾರರಹಿತವೆಂದು ವಾದಿಸುತ್ತಾರೆ.

ಕೆನಡಾ ಪ್ರಧಾನಿ ಟ್ರೂಡೊ ಹೇಳಿದೇನು..?
ನಿಜ್ಜರ್ ಹತ್ಯೆಯ ಬಗ್ಗೆ ತನ್ನ ಕಳವಳವನ್ನು ಭಾರತದ ಉನ್ನತ ಮಟ್ಟದ ಭದ್ರತಾ ಅಧಿಕಾರಿಗಳು ಮತ್ತು ಗುಪ್ತಚರ ಸಂಸ್ಥೆಗಳಿಗೆ ತಿಳಿಸಿರುವುದಾಗಿ ಟ್ರೂಡೊ ಬಹಿರಂಗಪಡಿಸಿದ್ದಾರೆ. ಈ ವಿಷಯವನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಬ್ರಿಟನ್ ಪ್ರಧಾನಿ ರಶ್ದಿ ಸುನಕ್ ಅವರ ಬಳಿ ಪ್ರಸ್ತಾಪಿಸಿರುವುದಾಗಿಯೂ ಟ್ರುಡೊ ಬಹಿರಂಗಪಡಿಸಿದ್ದಾರೆ.

ಈ ವಿಷಯದಲ್ಲಿ ಭಾರತ ಸರ್ಕಾರ ಕೆನಡಾದೊಂದಿಗೆ ಸಹಕರಿಸಬೇಕೆಂದು ನಾನು ಬಯಸುತ್ತೇನೆ ಎಂದು ಟ್ರುಡೊ ಹೇಳಿದ್ದಾರೆ. ನಿಜ್ಜರ್ ಹತ್ಯೆಯು ಕೆನಡಿಯನ್ನರನ್ನು ಕೆರಳಿಸಿದೆ. ಅವರಲ್ಲಿ ಅನೇಕರು ತಮ್ಮ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿಶ್ವ ಸಿಖ್ ಸಂಘಟನೆ ಸೇರಿದಂತೆ ಕೆನಡಾದ ಹಲವಾರು ಸಿಖ್ ಗುಂಪುಗಳು ಟ್ರುಡೊ ಅವರ ಘೋಷಣೆಯನ್ನು ಸ್ವಾಗತಿಸಿವೆ. ಈ ಹತ್ಯೆಗೆ ಸಂಬಂಧಿಸಿದಂತೆ ಸಮಾಜದಲ್ಲಿ ಮೂಡಿರುವ ಅನುಮಾನಗಳಿಗೆ ಪ್ರಧಾನಿ ಹೇಳಿಕೆ ಪುಷ್ಟಿ ನೀಡಿದೆ.

ಕೆನಡಾದಲ್ಲಿ ಭಾರತೀಯ ಮೂಲದ 14-18 ಲಕ್ಷ ಜನ
ಕೆನಡಾದಲ್ಲಿ ಭಾರತೀಯ ಮೂಲದ 14 ರಿಂದ 18 ಲಕ್ಷ ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. ಭಾರತದ ಹೊರಗೆ ಅತಿ ಹೆಚ್ಚು ಸಿಖ್ಖರನ್ನು ಹೊಂದಿರುವ ದೇಶ ಕೆನಡಾ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಟ್ರುಡೊ ಭೇಟಿಯಾದರು. ಆಗ ಉಭಯ ನಾಯಕರ ನಡುವೆ ಮಾತುಕತೆ ಬಿಸಿಯೇರಿತು. ದೇಶದಲ್ಲಿನ ಸಿಖ್ ಪ್ರತ್ಯೇಕತಾವಾದವನ್ನು ಉಲ್ಲೇಖಿಸಿ ಭಾರತ ಸರ್ಕಾರವು ಸಮ್ಮೇಳನದ ನೇಪಥ್ಯದಲ್ಲಿ ಹೊರಡಿಸಿದ ಹೇಳಿಕೆಯಲ್ಲಿ, ಭಾರತದ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಶಕ್ತಿಗಳನ್ನು ಹತ್ತಿಕ್ಕಲು ಕೆನಡಾ ಸರ್ಕಾರವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದರು.

ಕೆನಡಾ ಇತ್ತೀಚೆಗೆ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳ ಮಾತುಕತೆಗಳನ್ನು ಸ್ಥಗಿತಗೊಳಿಸಿದೆ. ಕೆನಡಾ ಇದಕ್ಕೆ ಕೆಲವು ಕಾರಣಗಳನ್ನು ವಿವರಿಸಿದರೆ, ಇದು ರಾಜಕೀಯ ಪ್ರೇರಿತ ಎಂದು ಭಾರತ ಪ್ರತಿಕ್ರಿಯಿಸಿದೆ.

ಇತ್ತೀಚಿನ ದಿನಗಳಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸಿಖ್ ನಾಯಕರಲ್ಲಿ ನಿಜ್ಜರ್ ಒಬ್ಬರು. ಯುಕೆಯಲ್ಲಿ ಖಲಿಸ್ತಾನ್ ಲಿಬರೇಶನ್ ಫೋರ್ಸ್ ಮುಖ್ಯಸ್ಥ ಎಂದು ಹೇಳಿಕೊಂಡ ಅವತಾರ್ ಸಿಂಗ್ ಖಾಂಡಾ ಬರ್ಮಿಂಗ್ಹ್ಯಾಮ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್‌ನಲ್ಲಿ ಭಾರತದ ಭಯೋತ್ಪಾದಕ ಎಂದು ಆರೋಪಿಸಲ್ಪಟ್ಟ ಪರಮಜಿತ್ ಸಿಂಗ್ ಪಂಜ್ವಾರ್ ಅವರನ್ನು ಈ ವರ್ಷದ ಮೇನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.

Share Post