ಖಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ; ಕೆನಡಾ ಗಂಭೀರ ಆರೋಪ
ಒಟ್ಟಾವಾ; ಕಳೆದ ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಗಿತ್ತು. ಈ ಕೊಲೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಗಂಭೀರ ಆರೋಪ ಮಾಡಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಹೌಸ್ ಆಫ್ ಕಾಮನ್ಸ್ ಉದ್ದೇಶಿಸಿ ಮಾತನಾಡುತ್ತಾ ಈ ಆರೋಪ ಮಾಡಿದ್ದಾರೆ.
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತೀಯ ಏಜೆಂಟರ ಕೈವಾಡವಿದೆ. ಹೀಗಾಗಿ ಈ ಬಗ್ಗೆ ನಮ್ಮ ಸರ್ಕಾರ ತೀವ್ರ ತನಿಖೆ ನಡೆಸುತ್ತಿದೆ ಎಂದು ಜಸ್ಟಿನ್ ಟ್ರುಡೋ ಹೇಳಿದ್ದಾರೆ. ಇನ್ನು ಈ ಆರೋಪ ಕೇಳಿಬಂದ ಬೆನ್ನಲ್ಲೇ ಭಾರತದ ಗುಪ್ತಚರ ಮುಖ್ಯಸ್ಥರನ್ನು ಉಚ್ಛಾಟಿಸಲಾಗಿದೆ. ಕೆನಡಾದ ಈ ರಾಜತಾಂತ್ರಿಕ ಕ್ರಮದಿಂದಾಗಿ ಒಟ್ಟಾವಾ ಮತ್ತು ದೆಹಲಿ ನಡುವಿನ ಸಂಬಂಧ ಸಾಕಷ್ಟು ಹದಗೆಟ್ಟಂತಾಗಿದೆ.
ಈ ಸಂಬಂಧ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಟ್ರುಡೊ ಸರ್ಕಾರ ಈ ಸಂಬಂಧ ತಕ್ಷಣದ ಕ್ರಮ ಕೈಗೊಂಡಿದೆ. ಇಂದು ನಾವು ಹಿರಿಯ ಭಾರತೀಯ ರಾಜತಾಂತ್ರಿಕರನ್ನು ಕೆನಡಾದಿಂದ ಹೊರಹಾಕಿದ್ದೇವೆ. ಉಚ್ಛಾಟಿತ ಭಾರತೀಯ ರಾಜತಾಂತ್ರಿಕರು ಕೆನಡಾದಲ್ಲಿರುವ ಭಾರತದ ವಿದೇಶಿ ಗುಪ್ತಚರ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಮುಖ್ಯಸ್ಥರಾಗಿದ್ದಾರೆ ಎಂದೂ ಜೋಲಿ ಹೇಳಿದ್ದಾರೆ.
ಜೂನ್ 18 ರಂದು ಹರ್ದೀಪ್ ಸಿಂಗ್ ನಿಜ್ಜರ್ ಮೇಲೆ ಗುಂಡಾ ಹಾರಿಸಿ ಕೊಲೆ ಮಾಡಲಾಗಿತ್ತು. ಭಾರತ ಈತನನ್ನು ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿತ್ತು. ಹೀಗಾಗಿ ಈತನ ಹತ್ಯೆಯ ಹಿಂದೆ ಭಾರತದ ಕೈವಾಡದ ಬಗ್ಗೆ ಅನುಮಾನ ವ್ಯಕ್ತವಾಗಿದೆ.