40 ಪರ್ಸೆಂಟ್ ಕಮೀಷನ್ ಆರೋಪದ ತನಿಖೆ; ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖೆ
ಬೆಂಗಳೂರು; ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿಗೆ ನೆರವಾಗಿದ್ದು, ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಷನ್ ಆರೋಪ ವಿಚಾರ. ಈ ವಿಚಾರವನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡು ಜನರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿತ್ತು. ಇದರಿಂದಾಗಿ ಬಿಜೆಪಿ ಹೀನಾಯವಾಗಿ ಸೋಲಲು ಇದೂ ಒಂದು ಕಾರಣವಾಯ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಅಂದು ಕಮೀಷನ್ ಆರೋಪ ಮಾಡಿದ್ದ ಕಾಂಗ್ರೆಸ್ ಈಗ ಯಾಕೆ 40 ಪರ್ಸೆಂಟ್ ಕಮೀಷನ್ ವಿಚಾರವಾಗಿ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನೆ ಎದ್ದಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಎಂಬಂತೆ ಸರ್ಕಾರ ಈ ವಿಚಾರವನ್ನು ತನಿಖೆಗೆ ಆದೇಶ ನೀಡಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ತನಿಖಾ ತಂಡವೊಂದರನ್ನು ರಚನೆ ಮಾಡಲಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಬಿಜೆಪಿ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಹಾಗೂ 40 ಪರ್ಸೆಂಟ್ ಕಮೀಷನ್ ಬಗ್ಗೆ ತನಿಖೆ ನಡೆಯಲಿದೆ. ಈ ಸಮಿತಿ ನೀಡಿದ ವರದಿ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ.