ಭಜರಂಗದಳ ನಿಷೇಧ ವಿಚಾರ; ಹೈದರಾಬಾದ್‌ನಲ್ಲಿ ಭಾರಿ ಪ್ರತಿಭಟನೆ
ಹೈದರಾಬಾದ್; ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧದ ಬಗ್ಗೆ ಪ್ರಸ್ತಾಪವಿದೆ. ಇದನ್ನು ಕರ್ನಾಟಕದಲ್ಲಿ ಬಿಜೆಪಿ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಹೀಗಿರುವಾಗಲೇ ಹೈದರಾಬಾದ್‌ನಲ್ಲೂ ಈ ವಿಚಾರ ಗದ್ದಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ ಹೈದರಾಬಾದ್‌ನಲ್ಲಿ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಹೈದರಾಬಾದ್‌ನ ಕಾಂಗ್ರೆಸ್ ಕಚೇರಿ ಬಳಿ ಸೇರಿದ ನೂರಾರು ಭಜರಂಗದಳದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಜೈಶ್ರೀರಾಮ್ ಎಂದು ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್ ಕಚೇರಿಗೆ ನುಗ್ಗಲು ಪ್ರಯತ್ನ ಮಾಡಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ನೂಕಾಟ, ತಳ್ಳಾಟ ಕೂಡಾ ನಡೆದಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.