BengaluruPolitics

ಲೋಕಸಭಾ ಚುನಾವಣೆಗೆ ಮುನ್ನ ನಡೆಯುತ್ತಾ ಆಪರೇಷನ್‌ ಹಸ್ತ..?

ಬೆಂಗಳೂರು; ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಪಕ್ಷಾಂತರಗಳು ನಡೆಯುತ್ತವಾ..? ಅದರಲ್ಲೂ ಬೆಂಗಳೂರಿನ ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ ಗಾಳ ಹಾಕುತ್ತಿದೆಯಾ..? ಈ ಪ್ರಶ್ನೆಗಳು ರಾಜ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯದ ನಾಯಕರಿಗೆ ದೊಡ್ಡ ಟಾಸ್ಕ್‌ ನೀಡಿದೆ. ಈ ಬಾರಿ ರಾಜ್ಯದಲ್ಲಿ ಕನಿಷ್ಠ 20 ಸಂಸದರನ್ನು ಗೆಲ್ಲಿಸಬೇಕು ಎಂದು ಟಾರ್ಗೆಟ್‌ ನೀಡಲಾಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್‌ ನಾಯಕರು ಆ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ್ದಾರೆ. ಬೇರೆ ಪಕ್ಷದಿಂದ ಬರುವವರಿಗಾಗಿ ಕೂಡಾ ಗಾಳ ಹಾಕಲಾಗುತ್ತಿದೆ. ಇನ್ನು ಕೆಲವರು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಪರೇಷನ್‌ ಗೆ ಕೈ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಕೆಲ ಶಾಸಕರು ಹಾಗೂ ಮಾಜಿ ಶಾಸಕರು ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಭಾವಿ ಸಮುದಾಯದ, ಹೆಚ್ಚು ಮತಗಳಿರುವ ಸಮುದಾಯಗಳ ಬಿಜೆಪಿ ಶಾಸಕರನ್ನು ಸೆಳೆಯುವುದು ಕಾಂಗ್ರೆಸ್‌ ಉದ್ದೇಶ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ ನಾಯಕರು ಈಗಾಗಲೇ ಕೆಲವರೊಂದಿಗೆ ಗುಪ್ತ ಮಾತುಕತೆ ಕೂಡಾ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕೂಡಾ ಅಲರ್ಟ್‌ ಆಗುತ್ತಿದ್ದಾರೆ. ಯಾರು ಪಕ್ಷ ಬಿಟ್ಟುಹೋಗುವ ಮನಸ್ಸು ಮಾಡುತ್ತಿದ್ದಾರೋ ಅವರಿಗೇ ಕೆಲವೊಂದು ಜವಾಬ್ದಾರಿಗಳನ್ನು ನೀಡುವ ಮೂಲಕ ಅವರಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ ಎನ್ನಲಾಗಿದೆ.

Share Post