BengaluruCrime

ಖಾಸಗಿ ಶಾಲಾ ಪ್ರಾಂಶುಪಾಲನಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ..?

ಬೆಂಗಳೂರು; ಖಾಸಗಿ ಶಾಲೆಯ ಹತ್ತು ವರ್ಷದ ವಿದ್ಯಾರ್ಥಿನಿಯ ಮೇಲೆ ಶಾಲೆಯ ಪ್ರಾಂಶುಪಾಲನೇ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ವರ್ತೂರು ಸಮೀಪದ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

ಹತ್ತು ವರ್ಷದ ವಿದ್ಯಾರ್ಥಿನಿಗೆ ನರ ದೌರ್ಬಲ್ಯವಿದ್ದು, ಶಾಲೆಗೆ ಹೋಗಿದ್ದಾಗ ಸುಸ್ತಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆ ಪ್ರಾಂಶುಪಾಲರಿಗೆ ಸುಸ್ತಾಗುತ್ತಿದೆ ಎಂದು ಹೇಳಿದ್ದಾಳೆ. ಹೀಗಾಗಿ ಪ್ರಾಂಶುಪಾಲ ಆಕೆಯನ್ನು ಆತನ ಕೊಠಡಿಗೆ ಕರೆದುಕೊಂಡು ಹೋಗಿ ಮಲಗಿಸಿದ್ದಾನೆ. ಇದೇ ವೇಳೆ ಆತ ಬಾಲಕಿ ಜೊತೆ ಸಲುಗೆಯಿಂದ ಮಾತಾಡಿಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಇದಾದ ಮೇಲೆ ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಅದೇ ಪ್ರಾಂಶುಪಾಲ ಬಾಲಕಿಯ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳಿಗೆ ಹೊಟ್ಟೆನೋವು ಬರುತ್ತಿದೆಯಂತೆ ಮನೆಗೆ ಕರೆದುಕೊಂಡು ಹೋಗಿ ಎಂದಿದ್ದಾನೆ. ಪೋಷಕರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ನೋಡಿದ್ದಾರೆ. ಈ ವೇಳೆ ರಕ್ತಸ್ರಾವವಾಗುತ್ತಿರುವುದು ನೋಡಿ ಬಾಲಕಿ ದೊಡ್ಡವಳಾಗಿದ್ದಾಳೆಂದು ಭಾವಿಸಿದ್ದಾರೆ. ಆಕೆಗೆ ಸ್ನಾನ ಕೂಡಾ ಮಾಡಿಸಿದ್ದಾರೆ. ಆದ್ರೂ ರಕ್ತಸ್ರಾವ ಹೆಚ್ಚಾಗಿದ್ದರಿಂದ ಅನುಮಾನಗೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ವೈದ್ಯರು ಪರೀಕ್ಷೆ ಮಾಡಿದಾಗ ಅತ್ಯಾಚಾರ ಆಗಿರಬಹುದು ಎಂಬುದು ವೈದ್ಯರಿಗೆ ಅನುಮಾನ ಬಂದಿದೆ. ಕೂಡಲೇ ಬಾಲಕಿಯನ್ನೂ ಈ ಬಗ್ಗೆ ವಿಚಾರಣೆ ನಡೆಸಿದಾಗ ಆಕೆಯೂ ಪ್ರಾಂಶುಪಾಲನ ವಿರುದ್ಧ ಹೇಳಿಕೆ ನೀಡಿದ್ದಾಳೆ. ಹೀಗಾಗಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Share Post