ಫೇಸ್‌ಬುಕ್ ಗೆಳೆಯನಿಗಾಗಿ ಪಾಕ್‌ಗೆ ತೆರಳಿದ ವಿವಾಹಿತ ಮಹಿಳೆ
ಜೈಪುರ; ಪಬ್ಜಿ ಮೂಲಕ ಪರಿಚಯವಾಗಿ ಮಕ್ಕಳೊಂದಿಗೆ ಭಾರತಕ್ಕೆ ಬಂದ ಸೀಮಾ ಹೈದರ್ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಹೀಗಿರುವಾಗಲೇ ಭಾರತದಿಂದ ಮಹಿಳೆಯೊಬ್ಬರು ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನನ್ನು ಸೇರಲು ಆಕೆ ಪಾಕಿಸ್ತಾನಕ್ಕೆ ಹೋಗಿದ್ದಾಳೆ.
ರಾಜಸ್ಥಾನದ ಬಿವಾಡಿ ಜಿಲ್ಲೆಯ ವಿವಾಹಿತ ಮಹಿಳೆ ಅಂಜು ಎಂಬಾಕೆ ಪಾಕಿಸ್ತಾನದ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದಾನೆ. ನಂತರ ಅದು ಪ್ರೀತಿಗೆ ತಿರುಗಿದೆ. ಹೀಗಾಗಿ ಆಕೆ ಪ್ರಿಯಕರನಿಗಾಗಿ ಪಾಕಿಸ್ತಾನದ ವಾಯವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯಕ್ಕೆ ತೆರಳಿದ್ದಾಳೆ. ಈ ವಿಚಾರವನ್ನು ಆಕೆಯ ಗಂಡ ಅರವಿಂದ್ ಕೂಡಾ ಖಚಿತಪಡಿಸಿದ್ದಾರೆ. ನನ್ನ ಜೊತೆ ಆಕೆ ವಾಟ್ಸಾಪ್ ಸಂಪರ್ಕದಲ್ಲಿದ್ದಳು. ಆದ್ರೆ ಭಾನುವಾರ ಸಂಜೆ ಕರೆ ಮಾಡಿ ಲಾಹೋರ್‌ನಲ್ಲಿದ್ದೇವೆ. ನಾಲ್ಕೈದು ದಿನದಲ್ಲಿ ಬರುತ್ತೇನೆ ಎಂದು ಹೇಳಿದ್ದಾಳೆ ಎಂದೂ ಅರವಿಂದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅರವಿಂದ್ ಡೇಟಾ ಎಂಟ್ರಿ ಕೆಲಸ ಮಾಡುತ್ತಾರೆ. ಕುಟುಂಬ ಬಾಡಿಗೆ ಫ್ಲಾಟ್‌ನಲ್ಲಿ ಇತ್ತು ಎಂದು ತಿಳಿದುಬಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ನಸ್ರುಲ್ಲಾ ಮತ್ತು ಅಂಜು ಫೇಸ್‌ಬುಕ್‌ನಲ್ಲಿ ಪರಿಚತರಾಗಿದ್ದರು ಎಂದು ತಿಳಿದುಬಂದಿದೆ. ಜೈಪುರಕ್ಕೆ ಹೋಗುವ ನೆಪದಲ್ಲಿ ಅಂಜು ಪಾಕಿಸ್ತಾನಕ್ಕೆ ತೆರಳಿದ್ದಾಳೆ.