DistrictsLifestyle

ಪ್ರವಾಸ ಕಥನ; ಕರಾವಳಿಯಲ್ಲಿ ʻಮಹಾʼ ಗಾರುಡಿ; ಶಾರದಾಂಬೆ ಮಡಿಲಲ್ಲಿ ʻಲಕ್ಷ್ಮೀʼ ಕಟಾಕ್ಷ..!

  ಲೇಖನ; ಮಹಾಲಕ್ಷ್ಮೀ ದೇವಾಡಿಗ, ಉಡುಪಿ

ನಾವೊಂದು ಯೋಚಿಸಿದರೆ ಕಾಲ ಮತ್ತೊಂದು ಯೋಜನೆ ಹಾಕಿಕೊಂಡಿರುತ್ತದೆ ಅನ್ನೋದು ನಮ್ಮ ಈ ಸಲದ ಎರಡನೇ ಬಾರಿಯ ಪಯಣದ ವೇಳೆ ಅರಿವಿಗೆ ಬಂದಿತ್ತು ನನಗೆ. ನಾವು ಮಾಡಿದ ಯೋಜನೆ ಫಲಕಾರಿ ಆಗದಿದ್ದರೂ ಕೂಡ ಅನಿರೀಕ್ಷಿತ ಪಯಣ ಕೊಂಚ ನಿರಾಳದ ಜೊತೆ ಕೊಂಚ ಬೇಸರವೂ ಉಂಟುಮಾಡಿತ್ತು. ಇದು ನಾನು ದ್ವಿತೀಯ ವರ್ಷದ ಬಿ ಎ ಓದುತ್ತಿದ್ದ ಸಮಯದ ಘಟನೆ.

ಮಂಗಳೂರಿನತ್ತ ನಮ್ಮ ಪಯಣ

ಪರೀಕ್ಷೆಯ ನಂತರ ಸ್ನೇಹಿತರೆಲ್ಲ ಸೇರಿ ಸುತ್ತಾಡಲು ಹೋಗಲೇಬೇಕು ಎಂದು ಹಾಕಿದ ಯೋಜನೆಯು ನಮ್ಮ ಜೊತೆ ಬಿಟ್ಟು ಕೊರೋನದ ಜೊತೆ ಪಯಣಿಸಿ ಬಿಟ್ಟಿತು. ಮತ್ತೆ ಗೃಹಬಂಧನದ ಜೊತೆ ನಮ್ಮ ದಿನಗಳ ಎಣಿಕೆ ಶುರುವಾಗಿತ್ತು. ಈ ಸಮಯದಲ್ಲಿ ಡಿಗ್ರಿಗೆ ಬಂದ ನಂತರ ನನ್ನ ಜೊತೆಗೂಡಿ ಪಯಣಿಸುತ್ತಿದ್ದ ನನ್ನ ಸ್ನೇಹಿತೆ ತನ್ನ ಊರಿನತ್ತ ಹೊರಟಿದ್ದಳು. ಆಕೆ ತನ್ನ ಹುಟ್ಟೂರಾದ ಚಿಕ್ಕಮಗಳೂರಿಗೆ ಹೊರಟರೆ ಬರುವುದು ಅದೆಷ್ಟೋ ಸಮಯ ಕಳೆದು ಅನ್ನೋದು ನನಗೆ ಚೆನ್ನಾಗಿಯೇ ಗೊತ್ತಿತ್ತು. ಆಕೆ ಹೋಗೋ ಹಿಂದಿನ ದಿನ ನನಗೆ ಕರೆಮಾಡಿ ಎಲ್ಲದರೂ ಸುತ್ತಾಡಲು ಹೋಗುವ ಯಾರೆಲ್ಲ ಬರ್ತಾರೆ ಅಂತ ಕೇಳಿ ಹೇಳು ಅಂದಳಷ್ಟೆ ನಮ್ಮ ಸ್ನೇಹಿತರಿಗೆಲ್ಲ ಸಂದೇಶ ಕಳುಹಿಸಿ ಸತತ ಎರಡು ಗಂಟೆಯ ಮಾತುಕತೆಯ ಬಳಿಕ ನಾನು ನನ್ನ ಸ್ನೇಹಿತೆ, ಮತ್ತಿಬ್ಬರು ಸ್ನೇಹಿತರು ಹೊರಡಲು ಸಿದ್ಧವಾಗಿದ್ದೆವು.

ಮಂಗಳೂರಿನತ್ತ ನಮ್ಮ ಪಯಣ ಅನ್ನೋದೇನೋ ನಿಗದಿ ಆಯಿತು . ಆದರೆ ವಾಹನ ವ್ಯವಸ್ಥೆಗೆ ಅಂತೂ ಇಂತೂ ತಲೆ ಓಡಿಸಿದಾಗ ಕೊನೆಗೆ ನೆನಪಾಗಿದ್ದು ನಮ್ಮ ಕಾಲೇಜಿನ ಸಮನ ಹೋಟೆಲಿನ ರಾಜೇಶ್ ಅಣ್ಣ. ಈ ಹಿಂದೆ ಒಮ್ಮೆ ʼಯಾವತ್ತಾದರೂ ಸುತ್ತಾಡಲು ಹೋಗಲು ಗಾಡಿ ಬೇಕಾದರೆ ನನ್ನ ಕೇಳುʼ ಎಂದಿದ್ದರು. ಕೊನೆಗೂ ಗಾಡಿ ಸಿಕ್ಕಿತ್ತು .ನಮ್ಮ ಪಯಣ ಮಂಗಳೂರಿನತ್ತ ಸಾಗಿತ್ತು.

ಹೊರಟದ್ದು ತಣ್ಣೀರುಬಾವಿ ಬೀಚ್ ಗೆ, ಹೋದದ್ದು ಪಾರ್ಕ್ ಗೆ!

ಗಾಡಿ ಸಿದ್ಧ ಮಾಡಿ ಹೊರಟಿದ್ದೆವು ಕೂಡ, ಆದರೆ ಅದೇನಾಯಿತೋ ಗೊತ್ತಿಲ್ಲ ಮಧ್ಯದಲ್ಲಿ ಒಂದು ಅನುಮಾನ ಯಾಕಂದ್ರೆ ಕೊರೋನಾ ಮತ್ತೆ ಮರುಪ್ರವೇಶ ಮಾಡಿದ ಕಾರಣ ಹೆಚ್ಚಿನೆಡೆ ಪ್ರವಾಸಿ ತಾಣಗಳಿಗೆ ಹೋಗುವುದನ್ನು ನಿಷೇಧಿಸಲಾಗಿತ್ತು. ಬಂದ ಅನುಮಾನಕ್ಕೂ ಇದ್ದ ಪರಿಸ್ಥಿತಿಗೂ ಸರಿಯಾಗಿ ತಣ್ಣೀರುಬಾವಿ ಬೀಚ್ ಮುಚ್ಚಲಾಗಿತ್ತು. ಪ್ರವೇಶವಿರಲಿಲ್ಲ. ಬರುವಾಗ ಇದ್ದ ಖುಷಿ ಹೋಗಲೇ ಬೇಕೆಂದಿದ್ದ ಜಾಗ ನೋಡಲು ಆಗಲಿಲ್ಲ ಎಂಬ ಬೇಸರ ದೊಂದಿಗೆ ಕೊನೆಯಾಗುತ್ತದೆ ಎನ್ನುವಾಗಲೇ ಪಕ್ಕದಲ್ಲೇ ಇದ್ದ ರಿಕ್ಷಾ ಡ್ರೈವರ್ ಒಂದು ಸಲಹೆ ನೀಡಿದರು. ತಣ್ಣೀರುಬಾವಿಗಿಂತ ಇನ್ನು ಸ್ವಲ್ಪ ದೂರ ಹೋದರೆ ಅಲ್ಲಿ ತಣ್ಣೀರುಬಾವಿ ಪಾರ್ಕ್ ಇದೆ ಅದನ್ನು ಮುಚ್ಚಲಿಲ್ಲ ಎಂದು ಅವರು ಹೇಳಿದಾಗ ಕಿವಿ ಹಿತ್ತಾಳೆಯಂತೆ ಅರಳಿತ್ತು. ಗಾಡಿ ಹತ್ತಿ ಮತ್ತೆ ಪಯಣ ತಣ್ಣೀರು ಬಾವಿ ಪಾರ್ಕ್ ಕಡೆಗೆ ಹೊರಟಿತು.

ಪುಣ್ಯಕ್ಕೆ ಆದಿನ ಅದು ತೆರೆದಿತ್ತು. ತುಂಬಾ ಜನರು ಕೂಡ ಅಲ್ಲೇ ಓಡಾಡುತ್ತಿದ್ದರು. ಅಲ್ಲಿ ಸುತ್ತಮುತ್ತ ಸ್ವಲ್ಪಹೊತ್ತು ಇದ್ದು ಪಾರ್ಕಿನಿಂದ ಹೋಗುವ ದಾರಿಯಲ್ಲಿ ಕಂಡ ಬೀಚ್ ನಲ್ಲಿ ಸುತ್ತಾಡಿ ಅಲ್ಲಿಂದ ವಾಪಸ್ ಬರುವಾಗ ಮೂಲ್ಕಿಯ ಕೊಳಚಿ ಕಂಬಳ ದ ಶಾಂಭವಿ ತೀರದಲ್ಲಿದ್ದ ನಮ್ಮ ಸ್ನೇಹಿತನ ಮನೆಗೆ ಭೇಟಿ ನೀಡಿ, ಮತ್ತೆ ಉಡುಪಿಗೆ ಬರುವ ಅರ್ಧದಾರಿಯಲ್ಲಿ ನಮ್ಮ ಒಂದು ಗಾಡಿ ಕೈಕೊಟ್ಟು ಅಂತೂ ಇಂತೂ ಹೇಗೋ ಬಂದು ಉಡುಪಿ ಸೇರಿಕೊಂಡ ದಿನವದು.

ಪಯಣ ೨-ಕೊನೆಕ್ಷಣದಲ್ಲಿ ಬದಲಾದ ಪಯಣದ ಹಾದಿ…

ಲಾಕ್ ಡೌನ್ ಏನೋ ಮುಗಿತು, ಅರ್ಧಕ್ಕೆ ನಿಂತುಹೋದ ಪರೀಕ್ಷೆಗಳು ಮತ್ತೆ ಪ್ರಾರಂಭವಾಗುವುದರ ಸೂಚಕವಾಗಿ ಪರೀಕ್ಷಾ ವೇಳಾಪಟ್ಟಿ ಕೂಡ ಪ್ರಕಟವಾಗಿತ್ತು. ಇದರ ನಡುವೆ ನಮ್ಮ ಹೊಸ ಪಯಣಕ್ಕೊಂದು ಮುನ್ನುಡಿ ಬರೆದಿದ್ದೆವು. ಊರಿಗೆ ಹೋಗಿದ್ದ ಸ್ನೇಹಿತೆಯ ಜೊತೆಗೆ ಅವಳ ಊರು ಸುತ್ತುವ ಯೋಜನೆ ಮಾಡಿದ್ದರೂ ಕೂಡ ಕೆಲಕಾರಣಗಳಿಂದ ಆ ಯೋಜನೆ ಬದಲಾಗಿತ್ತು.

ಆಗುಂಬೆ ಅಲ್ಲಿಂದ ಕುಂದಾದ್ರಿ, ಕವಲೆದುರ್ಗ, ನಾಗರ ಕೋಟೆ ಹೀಗೆ ಕೆಲವು ಕಡೆ ಸುತ್ತಿ ಕೊನೆಗೆ ಉಡುಪಿ ತಲುಪುವ ಯೋಜನೆ ರಚಿಸಲಾಗಿತ್ತು.

ನನಗೆ ಹೆಚ್ಚಾಗಿ ಬಸ್ಸು ಮತ್ತು ಕಾರಿನಲ್ಲಿ ತುಂಬಾ ದೂರದವರೆಗೆ ಪ್ರಯಾಣಿಸಿ ಅಭ್ಯಾಸವಿಲ್ಲ. ಈ ಕಾರಣಕ್ಕೋ ಏನೋ ನನಗೆ ಇವೆರಡರಲ್ಲಿ ಪಯಣಿಸಿದರೆ ಆರೋಗ್ಯ ಹದಗೆಡುತ್ತಿತ್ತು. ಹಾಗಾಗಿ ನಾನು ಬೈಕಿನಲ್ಲಿ ನನ್ನ ಪ್ರಯಾಣ ಎಂದು ಖಚಿತ ಪಡಿಸಿದೆ.

ನಾವೊಂದು ಏಳು ಜನ ಇದ್ದೆವು. ಅದರಲ್ಲಿ ಒಬ್ಬರು ನನ್ನ ಸ್ನೇಹಿತನ ತಾಯಿಯಾದರೆ ಇನ್ನೊಬ್ಬರು ನಮ್ಮ ನೆಚ್ಚಿನ ಸೀನಿಯರ್. ಇನ್ನು ಉಳಿದದ್ದು ಸ್ನೇಹಿತರಾದ ನಾವು ನಾಲ್ವರು.

ಬೆಳಗ್ಗೆ ಬೇಗ ಎದ್ದು ಬೇಕಾದ ಸಿದ್ಧತೆ ಮಾಡಿಕೊಂಡು ನಮ್ಮ ಪಯಣ 5:30ಯ ಸುಮಾರಿಗೆ ಶುರುವಾಗಿತ್ತು. ಯೋಜಿಸಿದ ಹಾಗೆ ಆಗುಂಬೆ ತಲುಪಿದೆವು. ಬೆಳ್ಳಂಬೆಳಗ್ಗೆ ಹೊರಟ ಪ್ರಯಾಣ, ಮಧ್ಯದಲ್ಲಿ ಸಿಕ್ಕ ಮಳೆ, ಸುತ್ತಮುತ್ತ ಕವಿದಿದ್ದ ಮಂಜು ಮೈ ತಾಕಿದಾಗ ಹೇಳಲಾಗದ ಚಳಿಯ ಜೊತೆ ಮುಂದಿನ ಪಯಣ ಹೇಗಿರಬಹುದು ಎಂಬ ಕುತೂಹಲ ಕೂಡ ಒಟ್ಟುಗೂಡಿ ಹೊಸ ಅನುಭವದ ಕಾತರ ಮೈ-ಮನಸ್ಸನ್ನು ಬೆಚ್ಚಗಿರಿಸಿತ್ತು. ಆಗುಂಬೆ ಘಾಟಿ ಹತ್ತುವಾಗ ಕಂಡ ಸುತ್ತಲ ಹಚ್ಚಹಸಿರ ರಮಣೀಯ ದೃಶ್ಯ ಮಳೆಗಾಲದಲ್ಲಿ ಅದರ ಸೊಬಗನ್ನು ಇಮ್ಮಡಿ ಗೊಳಿಸಿದ್ದಲ್ಲದೆ ಕಣ್ಣುಗಳನ್ನು ಕೂಡ ತಂಪಾಗಿಸಿತ್ತು. ಇದರ ಜೊತೆ ಸುತ್ತಲ ತರ್ಲೆ ಕೋತಿಗಳ ಮೋಜು ಮಸ್ತಿ ಮುಖದ ಮೇಲೊಂದು ಮುಗುಳುನಗು ತರಿಸಿದ್ದು ಕೂಡ ಸುಳ್ಳಲ್ಲ.

ಪಯಣದ ಆರಂಭ ಬಲು ಸೊಗಸಾಗಿ ಹಾಗೂ ಸಂತೋಷದಿಂದ ಕೂಡಿತ್ತು. ಆದರೆ ದಾರಿಮಧ್ಯೆ ಕುಂದಾದ್ರಿ ತಲುಪುವ ಮೊದಲೇ ಒಂದು ಬೇಸರದ ಸಂಗತಿ ತಿಳಿದುಬಂತು. ಮಳೆ ಜೋರಾಗಿ ಬಂದ ಕಾರಣ ಹೆಚ್ಚಿನೆಡೆ ಪ್ರವಾಸಿ ತಾಣಗಳಿಗೆ ಪ್ರವೇಶವೇ ಮಾಡುವಂತಿರಲಿಲ್ಲ. ಈ ಸುದ್ದಿ ಕೇಳಿದ ನನಗೆ ತುಂಬಾ ಬೇಸರವಾದರೂ ಬಂದ ದಾರಿಗೆ ಸುಂಕವಿಲ್ಲವೆಂಬ ಗಾದೆ ಮಾತನ್ನು ಬಿಡಬಾರದೆಂದು ಮತ್ತೆ ನಮ್ಮ ಪಯಣ ಮೊದಲೇ ಯೋಚನೆ ಮಾಡಿದ್ದ ಕಡೆಗೆ ಸಾಗಿತ್ತು.

ಶಾರದಾಂಬೆ ಕೃಪೆ ಮತ್ತು ಪ್ರಕೃತಿ ಸೊಬಗು…

ನಾವು ಮೊದಲು ಪಯಣಿಸಬೇಕು ಎಂದಿದ್ದದ್ದು ಚಿಕ್ಕಮಗಳೂರಿನ ಕಡೆಗೆ ಶೃಂಗೇರಿ ಅಲ್ಲಿಂದ ಮುಳ್ಳಯ್ಯನಗಿರಿ ಹಾಗೆ ನನ್ನ ಸ್ನೇಹಿತೆಯ ಮನೆ ಹೀಗೆ ಅಲ್ಲಿನ ಕೆಲಸ ಸ್ಥಳಗಳನ್ನು ವೀಕ್ಷಿಸಿ ಆನಂದಿಸಿ ಮಾರನೇ ದಿನ ಮರಳುವುದು ಎಂದಿತ್ತು. ಮೊದಲನೆಯದಾಗಿ ನಾವು ಹೊರಟಿದ್ದು ಶೃಂಗೇರಿಯತ್ತ. ದಾರಿಮಧ್ಯೆ ಮಳೆರಾಯ ಬಿಟ್ಟು ಬಿಡದಂತೆ ಸುರಿದಿದ್ದ. ಬೈಕಿನಲ್ಲಿ ಪಯಣಿಸಿದ್ದ ನನಗೆ ಮಳೆಯ ರಭಸ ತಡೆದುಕೊಳ್ಳುವುದು ಕಷ್ಟವಾಗಿದ್ದರೂ ಕೂಡ ಪಯಣದ ದಾರಿಯುದ್ದಕ್ಕೂ ಕಂಡ ಪ್ರಕೃತಿ ಸೌಂದರ್ಯ ತನಗಿಂತ ಸುಂದರವಾಗಿ ಈ ಭೂಮಿ ಮೇಲೆ ಮತ್ತಾರೂ ಇಲ್ಲ ಎಂದು ಕೊಚ್ಚಿಕೊಂಡ ಹಾಗೆ ಕಂಡು ನನ್ನ ಜೋಶ್‌ ನ್ನು ಮತ್ತಷ್ಟೂ ಹೆಚ್ಚಿಸಿತು. ಶೃಂಗೇರಿಯ ಶಾರದಾಂಬೆ ದರ್ಶನವಾದ ನಂತರ ನಮ್ಮ ಪ್ರಯಾಣ ಹೊರನಾಡಿನ ಕಡೆಗೆ ಮುಖಮಾಡಿತ್ತು.
ತೀರ್ಥಕೆರೆ ಜಲಪಾತ ಮತ್ತು ಹೊರನಾಡಿನ ಚಳಿ..

ಶೃಂಗೇರಿಯಿಂದ ಹೊರಟ ನಾವು ಮಧ್ಯದಲ್ಲಿ ದಾರಿ ತಪ್ಪಿ ಒಂದೆರಡು ಸುತ್ತು ಬಂದಿದ್ದರೂ ಮತ್ತೆ ಸರಿ ದಾರಿ ಹಿಡಿದು ನಾವು ಹೋದದ್ದು ಅಡ್ಡದಾರಿಯಿಂದ (ಶಾರ್ಟ್ ಕಟ್). ವಿಜಯಪುರದಿಂದ ಹೊರನಾಡು 40 ಕಿಲೋಮೀಟರ್ ಅಷ್ಟೆ ಇತ್ತು. ಅಡ್ಡದಾರಿ ಹಿಡಿದು ನಮ್ಮ ಪಯಣ ಮುಂದುವರೆದಾಗ ನಮಗೆ ಕಂಡಿದ್ದು ತೀರ್ಥಕೆರೆ ಜಲಪಾತ. ರಸ್ತೆಯ ಬದಿಯಲ್ಲಿ ಮೇಲಿನಿಂದ ಝರಿ ನೀರು ಭೂತಾಯಿ ಮಡಿಲಿಗೆ ಮಳೆಯ ಮಧ್ಯೆ ಅದೆಂತ ರಭಸದಿಂದ ಹರಿಯುತ್ತಿತ್ತು ಎಂದರೆ ಹರಿಯೋ ನೀರಿನ ಮಧ್ಯೆ ಸಂಗೀತ ಕೇಳಿ ಬರುವಂತಿತ್ತು. ಮಳೆ ಅತಿಯಾದ್ದರಿಂದ ಹೆಚ್ಚು ಕಾಲ ಅಲ್ಲಿ ಇರಲಾಗಲಿಲ್ಲ. ಆದಷ್ಟು ಆ ಮನೋಹರ ದೃಶ್ಯವನ್ನು ಕಣ್ತುಂಬಿಕೊಂಡು ಪಯಣ ಮುಂದುವರಿಸಿದೆವು. ಸುತ್ತಲ ನಿಸರ್ಗದ ಸೊಬಗು ನೋಡಲು ಕಣ್ಣೆರಡು ಸಾಲದಿದ್ದರೂ ಕೂಡ ನಮಗೆ ಬೇಸರ ತಂದಿದ್ದು ಅಲ್ಲಿನ ರಸ್ತೆಗಳು. ಕೆಲ ರಸ್ತೆಗಳು ಅಡ್ಡಾದಿಡ್ಡಿಯಾಗಿದ್ದರೆ, ಕೆಲವೊಂದು ಹಾವು ಹರಿದಾಡಿದಂತೆ ಇತ್ತು. ಇನ್ನು ಕೆಲ ರಸ್ತೆಗಳು ಪೂರ್ಣಪ್ರಮಾಣದಲ್ಲಿ ಹಾಳಾಗಿತ್ತು. ಅಂತು ಇಂತು ಹರಸಾಹಸಪಟ್ಟು ಹೊರನಾಡು ತಲುಪಿದೆವು.

ಹೊರನಾಡಿನ ಚಳಿ ವಿಪರೀತವಾಗಿತ್ತು. ದೇವರ ದರ್ಶನ ಪಡೆದು ಅಲ್ಲಿಂದ ಕಳಸಕ್ಕೆ ಬಂದು ಕಳಸೇಶ್ವರನ ದರ್ಶನ ಮಾಡಿದೆವು. ಹಾಗೆ ಅಲ್ಲೇ ಕಾಫಿ ತಿಂಡಿ ಮುಗಿಸಿದೆವು. ಇನ್ನೂ ಕೆಲ ಕಡೆ ಸುತ್ತೋದು ಬಾಕಿ ಇತ್ತು. ಆದರೆ ಸಮಯ ನಮಗೆ ಸಾಥ್ ನೀಡಿರಲಿಲ್ಲ. ಆತುರಾತುರದಲ್ಲಿ ಅಲ್ಲಿಂದ ಹೊರಟೆವು. ದಾರಿಮಧ್ಯೆ ಸಂಸೆಯ ಟೀ ಎಸ್ಟೇಟ್ ನಿಂದ ಹಾದು, ಕುದುರೆಮುಖದಿಂದ ಇಳಿದು, ಮಾಳದ ಘಾಟಿ ದಾಟಿ ಬರುವಾಗ ಬೈಕ್ ನ ಲ್ಲಿದ್ದ ನನಗೆ ಪಾಸ್ ತೆಗೆದುಕೊಳ್ಳುವುದು ಮರೆತು ಹೋಗಿತ್ತು. ಇದಕ್ಕೆ ಸರಿಯಾಗಿ ಪಾಸ್ ಕೊಡುವವರು ಕೂಡ ಅಲ್ಲಿರಲಿಲ್ಲ! ಘಾಟಿ ಇಳಿದಾಗ ನಮ್ಮ ಗಾಡಿ ಹಿಡಿದರು. 15 ನಿಮಿಷ ಪೊಲೀಸರ ಮನ ಬದಲಿಸುವಲ್ಲಿ ಸಾಕು ಹಿಡಿದಿತ್ತು. ಅಂತು ಇಂತು ಕಾರ್ಕಳದಿಂದ ಹಾದುಬಂದು ಉಡುಪಿ ತಲುಪಿದೆವು…

ಕೆಲವೊಂದು ಸಂದರ್ಭದಲ್ಲಿ ನಾವು ಏನನ್ನು ಯೋಚನೆ ಮಾಡಿರುತ್ತೇವೆಯೋ ಅದು ನಡೆಯುವುದಿಲ್ಲ. ಹಾಗಂತ ನಮ್ಮ ಯೋಚನೆಯ ವಿರುದ್ಧ ನಡೆಯುವುದೆಲ್ಲವೂ ತಪ್ಪೇನೂ ಅಲ್ಲ. ಮಳೆಗಾಲದ ಸುತ್ತಲ ಪ್ರದೇಶ, ಹಚ್ಚಹಸಿರ ವಾತಾವರಣ, ಆ ಚಳಿ, ನಮಗಾದ ಅನುಭವ ಎಲ್ಲವೂ ಸುಂದರವಾಗಿಯೇ ಇತ್ತು. ಪಯಣದ ಶುರು ಚೆನ್ನಾಗಿದ್ದರೂ ಕೂಡ ಅಂತ್ಯ ನನಗೆ ಬೇಕಾದ ಹಾಗಿರಲಿಲ್ಲ. ಇನ್ನು ಮುಂದೆ ಏನಾದರೂ ಯೋಚನೆ ಮಾಡುವಾಗ, ಯೋಜನೆ ಹಾಕಿ ಹೋಗುವಾಗ ಏನು ಮಾಡಬೇಕು? ಹೇಗೆ ಮಾಡಬೇಕು? ಮುಂತಾದ ವಿಷಯಗಳನ್ನು ತಿಳಿಸಿಕೊಡಲು ಒಂದು ಪಾಠ ದೊರೆತಂತಾಯಿತು.

ಪಯಣಿಸುವುದು ಎಂದರೆ ಕೇವಲ ಮೋಜು-ಮಸ್ತಿಗೆ ಸುತ್ತಾಡುವುದು ಮಾತ್ರವಲ್ಲದೆ ಅದರಿಂದ ಬಹಳಷ್ಟು ವಿಷಯಗಳನ್ನು ಜೀವನ ಮೌಲ್ಯಗಳನ್ನು ಕೂಡ ಕಲಿಯಬಹುದು. ನಮ್ಮ ಬದುಕಿಗೆ ಬೇಕಾದವು ಗಳನ್ನು ಅಳವಡಿಸಿಕೊಳ್ಳಬಹುದು. ಇದರಿಂದ ನಾನು ಹೇಳುವುದೇನೆಂದರೆ ಒಂದು ಸ್ಥಳಕ್ಕೆ ಭೇಟಿ ನೀಡುವ ಮೊದಲು ನೀವು ಹೊರಡುವ ಸಮಯ ಹಾಗೂ ಅಲ್ಲಿಯ ವಾತಾವರಣವನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ. ಕೆಲವೊಂದು ಸಂದರ್ಭಗಳು ನಮಗೆ ಬೇಕಾದ ಹಾಗೆ ಇರದಿದ್ದರೂ ಆ ಸಂದರ್ಭಗಳಿಗೆ ನಾವು ಒಗ್ಗಿಕೊಂಡು ಹೋಗಬಹುದು, ಅಥವಾ ಆ ಸಂದರ್ಭಗಳನ್ನು ನಮಗೆ ಬೇಕಾದ ಹಾಗೆ ಬದಲಿಸಿಕೊಳ್ಳುವ ಪ್ರಯತ್ನವನ್ನು ಮಾಡಬಹುದೆಂದು ಈ ಪಯಣ ನನಗೆ ತಿಳಿಸಿಕೊಟ್ಟಿದೆ.

 

Share Post