ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು; ಬೆಂಗಳೂರಲ್ಲಿ ಐವರು ಶಂಕಿತ ಉಗ್ರರ ಸೆರೆ
ಬೆಂಗಳೂರು; ಬೆಂಗಳೂರಿನಲ್ಲಿ ಭಾರಿ ವಿಧ್ವಂಸಕ ಕೃತ್ಯ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಐವರೂ ಶಂಕಿತ ಉಗ್ರರನ್ನು ಹದಿನೈದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ನಗರ ಪೊಲೀಸ್ ಕಮೀಷನರ್ ದಯಾನಂದ್ ಮಾಹಿತಿ ನೀಡಿದ್ದಾರೆ.
ಬಂಧಿತ ಶಂಕಿತರ ಉಗ್ರರು ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದವರು ಎಂದು ಹೇಳಲಾಗುತ್ತಿದೆ. ಬಂಧಿತರಿಂದ ಏಳು ನಾಡ ಪಿಸ್ತೂಲ್, ೪೨ ಗುಂಡುಗಳು, ೨ ಸ್ಯಾಟಲೈಟ್ ಫೋನ್ ಮಾದರಿ ವಾಕಿಟಾಕಿ, ಗ್ರನೇಡ್‌ಗಳು, ಬಾಂಬ್‌ಗಳು, ಹಲವು ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಶಂಕಿತ ಉಗ್ರರು ಕೊಲೆ ಪ್ರಕರಣವೊಂದರಲ್ಲಿ 18 ತಿಂಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಈ ವೇಳೆ ಇವರಿಗೆ ಉಗ್ರರ ಸಂಪರ್ಕವಾಗಿದೆ ಎಂದು ತಿಳಿದು ಬಂದಿದೆ.
2018ರಲ್ಲಿ ನೂರ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಈ ಸಂಬಂಧ ಈ ಆರೋಪಿಗಳು ಜೈಲು ಸೇರಿದ್ದರು. ಜೈಲಿನಲ್ಲಿದ್ದ ನಸೀರ್ ಎಂಬ ಶಂಕಿತ ಉಗ್ರ ಈ ಆರೋಪಿಗಳಿಗೆ ವಿಧ್ವಂಸಕ ಕೃತ್ಯಕ್ಕೆ ಪ್ರೇರೇಪಿಸಿದ್ದ ಎಂದು ತಿಳಿದುಬಂದಿದೆ. ನಸೀರ್ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಆರೋಪಿ ಎಂದು ತಿಳಿದುಬಂದಿದೆ. ಇನ್ನು ಈ ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ. ಆತನ ಸೂಚನೆಯಂತೆಯೇ ಈ ಕೃತ್ಯ ಕೈಹಾಕಲಾಗಿತ್ತು ಎಂದು ಹೇಳಲಾಗುತ್ತಿದೆ.
ಸುಲ್ತಾನ್ ಪಾಳ್ಯದ ಮಸೀದಿ ಬಳಿಯ ಮನೆಯಲ್ಲಿ ಮೀಟಿಂಗ್ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ. ಸುಹೈಲ್, ಉಮರ್, ತಬ್ರೇಜ್, ಮುದಾಸಿರ್ ಹಾಗೂ ಫೈಜಲ್ ಬಂಧಿತ ಶಂಕಿತ ಉಗ್ರರು ಎಂದು ತಿಳಿದುಬಂದಿದೆ. ವಿದೇಶದಲ್ಲಿರುವ ಪ್ರಮುಖ ಆರೋಪಿ ಇವರಿಗೆ ಹಣ ಹಾಗೂ ಸ್ಫೋಟಕಗಳನ್ನು ಪೂರೈಕೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.