BengaluruEconomyPolitics

ಗೃಹ ಜ್ಯೋತಿ; ನಿಮ್ಮ ಮನೆಗೆ ಎಷ್ಟು ವಿದ್ಯುತ್‌ ಫ್ರೀ ಸಿಗುತ್ತೆ..? – ಸರ್ಕಾರದ ಲೆಕ್ಕಾಚಾರ ಏನು..?

ಬೆಂಗಳೂರು; ರಾಜ್ಯ ಸರ್ಕಾರ ಐದು ಗ್ಯಾರೆಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯನ್ನೂ ಜುಲೈ 1ರಿಂದ ಜಾರಿಗೆ ತರುತ್ತಿದೆ. ಎಲ್ಲರಿಗೂ 200 ಯೂನಿಟ್‌ ವರೆಗೆ ಫ್ರೀ ಎಂದಿದ್ದ ಸರ್ಕಾರ, ಕೆಲ ಕಂಡೀಷನ್‌ ಹಾಕಿದೆ. ವಿದ್ಯುತ್‌ ವೇಷ್ಟ್‌ ಆಗದಂತೆ ತಡೆಯಲು ಈ ರೀತಿಯ ಷರತ್ತು ವಿಧಿಸಲಾಗಿದೆ.

ಆಶ್ವಾಸನೆ ಕೊಟ್ಟಂತೆ ತಿಂಗಳಿಗೆ 200 ಯೂನಿಟ್‌ ವಿದ್ಯುತ್‌ ಉಚಿತ ಕೊಡೋದಕ್ಕೆ ಸರ್ಕಾರ ಬದ್ಧವಾಗಿದೆ. ಆದ್ರೆ, ನೀವು ಈ ಮೊದಲು ಅಷ್ಟು ಯೂನಿಟ್‌ ಬಳಸಿರಬೇಕು ಅಷ್ಟೇ. ಅಂದರೆ ನೀವು ಸಾಮಾನ್ಯವಾಗಿ ಸದ್ಯ ತಿಂಗಳಿಗೆ ಎಷ್ಟು ಯೂನಿಟ್‌ ವಿದ್ಯುತ್‌ ಬಳಸುತ್ತಿದ್ದೀರೋ ಅದಕ್ಕೆ ಇನ್ನೂ ಹತ್ತು ಪರ್ಸೆಂಟ್‌ ಹೆಚ್ಚು ವಿದ್ಯುತ್‌ ಬಳಸಿದರೂ ನೀವು ಬಿಲ್‌ ಕಟ್ಟುವ ಹಾಗಿಲ್ಲ. ಅದಕ್ಕಿಂತ ಹೆಚ್ಚಿಗೆ ಬಳಸಿದರೆ ಮಾತ್ರ ಅದಕ್ಕೆ ಬಿಲ್‌ ಪಾವತಿ ಮಾಡಬೇಕಾಗುತ್ತದೆ.

ಉದಾಹರಣೆಗೆ ನೀವು ವರ್ಷಕ್ಕೆ 1200 ಯೂನಿಟ್‌ ವಿದ್ಯತ್‌ ಬಳಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಇದನ್ನು ಸರ್ಕಾರ ಕಳೆದ ವರ್ಷಕ್ಕೆ ಹೋಲಿಸಿ ನೋಡುತ್ತದೆ. ಕಳೆದ 12 ತಿಂಗಳಲ್ಲಿ ನೀವು 1200 ಯೂನಿಟ್‌ ವಿದ್ಯುತ್‌ ಬಳಸಿದ್ದೀರಿ ಎಂದುಕೊಳ್ಳಿ. ಆಗ ಅದನ್ನು ತಿಂಗಳಿಗೆ ಲೆಕ್ಕ ಹಾಕಿದರೆ 100 ಯೂನಿಟ್‌ ಆಗುತ್ತದೆ. ಅಂದರೆ ನೀವು ಸರಾಸರಿ ತಿಂಗಳಿಗೆ 100 ಯೂನಿಟ್‌ ವಿದ್ಯುತ್‌ ಬಳಸುತ್ತಿದ್ದೀರಿ ಎಂದರ್ಥ. ಅದಷ್ಟಾದರೆ ನಿಮಗೆ ಸಾಕು. ಆದರೂ ಸರ್ಕಾರ ಇನ್ನೂ ಹತ್ತು ಪರ್ಸೆಂಟ್‌ ವಿದ್ಯುತ್‌ ಹೆಚ್ಚು ಕೊಡುತ್ತೆ. ಅಂದರೆ 110 ಯೂನಿಟ್‌ ತನಕ ನಿಮಗೆ ವಿದ್ಯುತ್‌ ಫ್ರೀ ಇರುತ್ತದೆ. 110ಕ್ಕಿಂತ ಹೆಚ್ಚು ಯೂನಿಟ್‌ ಬಳಸಿದಾಗ ಬಳಸಿದ ಹೆಚ್ಚಿನ ಯೂನಿಟ್‌ಗೆ ನೀವು ಹಣ ಪಾವತಿ ಮಾಡಬೇಕಾಗುತ್ತದೆ.

ಒಂದು ವೇಳೆ ವರ್ಷಕ್ಕೆ 2400 ಯೂನಿಟ್‌ ಬಳಕೆ ಮಾಡುತ್ತಿದ್ದರೆ, ಅದನ್ನು ತಿಂಗಳಿಗೆ ಲೆಕ್ಕ ಹಾಕಿದರೆ ಅದು 200 ಯೂನಿಟ್‌ ಆಗುತ್ತದೆ. ನೀವು ಕಳೆದ 12 ತಿಂಗಳಲ್ಲಿ ತಿಂಗಳಿಗೆ ಸರಾಸರಿ 200 ಯೂನಿಟ್‌ ಬಳಕೆ ಮಾಡಿದ್ದರೆ, ನಮಗೆ ಅದು ಕೂಡಾ ಫ್ರೀ. ಆದ್ರೆ 200 ಯೂನಿಟ್‌ಗಿಂತ ಹೆಚ್ಚು ಬಳಕೆ ಮಾಡಿದರೆ ಹೆಚ್ಚು ಬಳಕೆ ಮಾಡಿದ ವಿದ್ಯುತ್‌ಗೆ ಹಣ ಪಾವತಿಸಬೇಕು. 200 ಯೂನಿಟ್‌ಗಿಂತ ಹೆಚ್ಚಿಗೆ ಬಳಸುತ್ತಿರುವವರಿಗೂ 200 ಯೂನಿಟ್‌ವರೆಗೆ ವಿದ್ಯುತ್‌ ಫ್ರೀ ಸಿಗುತ್ತದೆ.

ಉದಾಹರಣೆ ಹೇಳೋದಾದರೆ, ಒಂದು ಹೋಟೆಲ್‌ನಲ್ಲಿ 100 ರೂಪಾಯಿಗೆ ಅನ್‌ಲಿಮಿಟೆಡ್‌ ಊಟ ಇರುತ್ತದೆ. ಇಲ್ಲಿ ಊಟ ಮಾಡಲು ಹೋಗುವವರಲ್ಲಿ ಕೆಲವರು ಹೆಚ್ಚು ತಿನ್ನುತ್ತಾರೆ. ಕೆಲವರು ಕಡಿಮೆ ಊಟ ಸೇವನೆ ಮಾಡುತ್ತಾರೆ. ಆದ್ರೆ ಹೆಚ್ಚು ತಿಂದವನನ್ನು ನೋಡಿ ಅವನು ಅಷ್ಟು ಅನ್ನ ತಿಂದ ನನಗೂ ಅಷ್ಟು ಬಡಿಸಿ ನಾನು ಅದನ್ನು ಬಿಸಾಡ್ತೀನಿ ಅನ್ನೋದಕ್ಕೆ ಆಗೋದಿಲ್ಲ. ಯಾರಿಗೆ ಎಷ್ಟೋ ಬೇಕೋ ಅಷ್ಟನ್ನು ಬಡಿಸಿಕೊಳ್ಳಬಹುದು. ಆದ್ರೆ ಬೆಲೆ ಮಾತ್ರ ಎಲ್ಲರಿಗೂ ಒಂದೇ ಇರುತ್ತದೆ. ಅದೇ ರೀತಿ ವಿದ್ಯುತ್‌ ನ್ನು ಈ ಹಿಂದೆ ಯಾರು ಎಷ್ಟು ಬಳಸುತ್ತಿದ್ದರೋ ಅದಕ್ಕಿಂತ ಹತ್ತು ಪರ್ಸೆಂಟ್‌ ಹೆಚ್ಚು ಕೊಡೋದಕ್ಕೆ ಸರ್ಕಾರ ತೀರ್ಮಾನ ಮಾಡಿದೆ.

ಸರ್ವೇ ಪ್ರಕಾರ, ರಾಜ್ಯದಲ್ಲಿ ಸರಾಸರಿ ಗೃಹಬಳಕೆ ವಿದ್ಯತ್‌ ಪ್ರಮಾಣ ಕೇವಲ 44 ಯೂನಿಟ್‌ ಅಷ್ಟೇ. ಬಹುಪಾಲು ಮನೆಗಳಲ್ಲಿ 50 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುತ್ತಿದ್ದಾರೆ. ಇವರಿಗೆ ಅಷ್ಟು ಸಾಕು. ಅದಕ್ಕಿಂತ ಸ್ವಲ್ಪ ಹೆಚ್ಚು ಕೊಟ್ಟರೆ ಸಾಕಾಗುತ್ತದೆ. ಆದ್ರೆ ಎಲ್ಲರಿಗೂ 200 ಯೂನಿಟ್‌ ಉಚಿತ ಎಂದರೆ ವಿನಾಕಾರಣ ವಿದ್ಯುತ್‌ ಪೋಲು ಮಾಡುತ್ತಾರೆ. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತದೆ. ಸರ್ಕಾರಕ್ಕೆ ನಷ್ಟವಾಗುತ್ತದೆ ಅಂದರೆ ಅದು ಜನರಿಗೇ ನಷ್ಟ. ಹೀಗಾಗಿ ಸರ್ಕಾರ ಅಗತ್ಯಕ್ಕೆ ತಕ್ಕಂತೆ ಉಚಿತ ವಿದ್ಯುತ್‌ ಕೊಡಲು ಮುಂದಾಗಿದೆ. ಇದು ಒಳ್ಳೆಯ ನಿರ್ಧಾರ ಎಂದೇ ಹೇಳಬಹುದು.

Share Post