BengaluruCrime

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ; ತನಿಖೆಯ ಹೊಣೆ ಸಿಸಿಬಿಗೆ

ಬೆಂಗಳೂರು; ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ಬಾಂಬ್‌ ಸ್ಫೋಟ ಸಂಭವಿಸಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಸಧ್ಯ ಪ್ರಕರಣದ ತನಿಖೆಯ ಹೊಣೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಈ ಆದೇಶ ಹೊರಡಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ರಾಮೇಶ್ವರಂ ಕೆಫೆಯ ವಾಶ್‌ ಬೇಸಿನ್‌ ಬಳಿ ಸ್ಫೋಟ ನಡೆಸಲಾಗಿತ್ತು. ಈ ಸಂಬಂಧ ಹೆಚ್​ಎಎಲ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯ ಹೊಣೆಯನ್ನು ಸಿಟಿ ಕ್ರೈಂ ಬ್ರಾಂಚ್‌ಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿ ಎಸಿಪಿ ನವೀನ್ ಕುಲಕರ್ಣಿ ಅವರನ್ನು ನೇಮಕಗೊಂಡಿದ್ದಾರೆ.

ಇನ್ನು ಆರೋಪಿಯ ಚಹರೆ, ಚಲನವಲನಗಳು ರಾಮೇಶ್ವರಂ ಕೆಫೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ತಲೆ ಮೇಲೆ ಟೋಪಿ, ಮುಖಕ್ಕೆ ಮಾಸ್ಕ್‌ ಧರಿಸಿದ್ದ ವ್ಯಕ್ತಿ ಬ್ಯಾಗ್‌ನೊಂದಿಗೆ ಶುಕ್ರವಾರ ಬೆಳಗ್ಗೆ 11.10ರ ಸುಮಾರಿಗೆ ರಾಮೇಶ್ವರಂ ಕೆಫೆ ಪ್ರವೇಶ ಮಾಡಿದ್ದ. ಆತ ಅಲ್ಲಿ ರವೆ ಇಡ್ಲಿ ಖರೀದಿ ಮಾಡಿ ಸೇವನೆ ಮಾಡಿದ್ದ. ಆದ್ರೆ ಆ ವ್ಯಕ್ತಿ ರಾಮೇಶ್ವರಂ ಕೆಫೆಯಲ್ಲೇ ಸುಮಾರು ಒಂದು ಗಂಟೆ ಕಾಲ ಇದ್ದ ಎಂದು ತಿಳಿದುಬಂದಿದೆ. ನಂತರ ಈ ವ್ಯಕ್ತಿ ಆತುರ ಆತುರವಾಗಿ ನಡೆದುಕೊಂಡು ಹೋಗಿದ್ದಾನೆ. ಹೀಗಾಗಿ ಈ ವ್ಯಕ್ತಿಯೇ ಬಾಂಬ್‌ ಇಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಶಂಕಿತ ಆರೋಪಿ ಬಸ್‌ನಲ್ಲಿ ಬಂದು ರಾಮೇಶ್ವರಂ ಕೆಫೆ ಪ್ರವೇಶ ಮಾಡಿದ್ದ ಎಂದು ತಿಳಿದುಬಂದಿದೆ. ಹೋಗುವಾಗ ನಡೆಯುತ್ತಲೇ ಸ್ವಲ್ಪ ದೂರ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಆತ ಎಲ್ಲಿ ಹೋದ ಎಂಬುದು ಗೊತ್ತಾಗಿಲ್ಲ. ಪೊಲೀಸರು ಅನುಮಾನದ ಮೇಲೆ ನಾಲ್ವರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯ ಅವರು ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಜೊತೆಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ. ಘಟನೆಯಲ್ಲಿ ಹತ್ತು ಮಂದಿ ಗಾಯಗೊಂಡಿದ್ದರು. ಇದರಲ್ಲಿ ಗಾಯಾಳು ಹಿಮಾಂಶು ಸೇರಿ ಮೂವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಡಿಸ್‌ಚಾರ್ಜ್‌ ಆಗಲಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳವಾದ ರಾಮೇಶ್ವರಂ ಕೆಫೆಗೂ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅನಂತರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್‌ ಹಾಗೂ ಹಿರಿಯ ಅಧಿಕಾರಿಗಳ ಪೊಲೀಸ್‌ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು. ತನಿಖೆಯ ಪ್ರಗತಿ ಹಾಗೂ ಬೆಂಗಳೂರು ನಗರದ ಭದ್ರತೆ ಕುರಿತಂತೆ ಮಾಹಿತಿ ಪಡೆದುಕೊಂಡರು.

ಒಂದೂವರೆ ವರ್ಷದ ಹಿಂದೆ ಮಂಗಳೂರಿನಲ್ಲಿ ಕುಕ್ಕರ್‌ನಲ್ಲಿ ಬಾಂಬ್‌ ಇಟ್ಟು ಆಟೋದಲ್ಲಿ ಸಾಗಿಸುತ್ತಿದ್ದಾಗ ಸ್ಫೋಟ ಸಂಭವಿಸಿತ್ತು. ಈ ಪ್ರಕರಣದಲ್ಲಿ ಬಳಸಲಾದ ವಸ್ತುಗಳೇ ರಾಮೇಶ್ವರಂ ಕೆಫೆಯ ಸ್ಫೋಟಕ್ಕೂ ಬಳಸಲಾಗಿದೆ. ಹೀಗಾಗಿ ಮಂಗಳೂರಿನ ಸ್ಫೋಟಕ್ಕೂ ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟಕ್ಕೆ ಸಾಮ್ಯತೆ ಕಂಡುಬರುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಆರೋಪಿಯ ಸುಳಿವು ಸಿಕ್ಕಿದೆ. ಪೊಲೀಸರು ಎಂಟು ತಂಡಗಳಾಗಿ ಹುಡುಕಾಟ ನಡೆಸಿದ್ದಾರೆ ಎಂದೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Share Post