BengaluruPolitics

Voting process; ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಹೇಗೆ ನಡೆಯುತ್ತೆ..?

ಬೆಂಗಳೂರು; ನಾಳೆ (ಮೇ 10) ಬೆಳಗ್ಗೆಯಿಂದ ಮತದಾನ ಶುರುವಾಗುತ್ತದೆ. ಈಗಾಗಲೇ ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬಿಗಿ ಬಂದೋಬಸ್ತ್‌ನ್ನು ಏರ್ಪಡಿಸಲಾಗಿದೆ. ಇಂದು ಸಂಜೆ ಮತಗಟ್ಟೆ ಅಧಿಕಾರಿಗಳು ಅವರಿಗೆ ಸೂಚಿಸಿರುವ ಮತಗಟ್ಟೆಗಳಿಗೆ ಹೋಗಲಿದ್ದಾರೆ. ಅಂದಹಾಗೆ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಹೇಗೆ ನಡೆಯುತ್ತೆ ಅನ್ನೋದರ ಮಾಹಿತಿ ಇಲ್ಲಿದೆ.

ಮೊದಲಿಗೆ ಮತ ಹಾಕುವವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ತಮ್ಮ ಮತಗಟ್ಟೆ ಯಾವುದು ಎಂಬುದನ್ನು ಮತಗಟ್ಟೆಯ ಹೊರಗಿರುವ ಏಜೆಂಟರುಗಳ ಮೂಲಕ ಮಾಹಿತಿ ಪಡೆದುಕೊಳ್ಳಬೇಕು. ಅನಂತರ, ಯಾವುದಾದರೊಂದು ಗುರುತಿನ ಚೀಟಿಯೊಂದಿಗೆ ಕ್ಯೂನಲ್ಲಿ ನಿಲ್ಲಬೇಕು. ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌, ಕೆಲಸ ಮಾಡುವ ಸರ್ಕಾರಿ ಸಂಸ್ಥೆಗಳು ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ, ಪ್ಯಾನ್‌ ಕಾರ್ಡ್‌ ಇತ್ಯಾದಿಗಳಲ್ಲಿ ಒಂದನ್ನು ತೋರಿಸಬಹುದು.

೧. ಮತಗಟ್ಟೆ ಪ್ರವೇಶಿಸುತ್ತಿದ್ದಂತೆ ಚುನಾವಣಾ ಸಿಬ್ಬಂದಿಗೆ ನಿಮ್ಮ ಗುರುತಿನ ಚೀಟಿ ನೀಡಬೇಕು. ಅವರು ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡುತ್ತಾರೆ. ಅದರಲ್ಲಿ ಮಾರ್ಕ್‌ ಮಾಡುತ್ತಾರೆ.
೨. ನಂತರ ಪಕ್ಕದ ಟೇಬಲ್‌ನಲ್ಲಿ ಕುಳಿತಿರುವ ಅಧಿಕಾರಿ ನಿಗದಿಪಡಿಸಿದ ನಿಮ್ಮ ಬೆರಳಿಗೆ ಇಂಕ್‌ ಹಾಕುತ್ತಾರೆ. ಜೊತೆಗೆ ಪುಸ್ತಕದಲ್ಲಿ ಸಹಿ ಮಾಡಿಸಿಕೊಳ್ಳುತ್ತಾರೆ
೩. ಮೂರನೇ ಟೇಬಲ್‌ನಲ್ಲಿ ಕುಳಿತಿರುವ ಅಧಿಕಾರಿ ಬಳಿ ನೀವು ತಂದ ಮತದಾರ ಸಂಖ್ಯೆ ಇರುವ ಸ್ಲಿಪ್‌ನ್ನು ನೀಡಬೇಕು. ನಂತರ ಗುಪ್ತ ಮತದಾನಕ್ಕೆ ನಿಗದಿಪಡಿಸಿದ ಜಾಗಕ್ಕೆ ತೆರಳಬೇಕು
೪. ನಂತರ ಕಾರ್ಡ್‌ಬೋರ್ಡ್‌ ಅಡ್ಡವಾಗಿ ಇಟ್ಟಿರುವ ಎಲೆಕ್ಟ್ರಾನಿಕ್‌ ಮತಯಂತ್ರದಲ್ಲಿ ನಿಮ್ಮ ಆಯ್ಕೆಯ ಅಭ್ಯರ್ಥಿಯ ಚಿಹ್ನೆಯ ಪಕ್ಕದಲ್ಲಿರುವ ಬಟನ್‌ ಒತ್ತಬೇಕು. ಆಗ ಬೀಪ್‌ ಶಬ್ದ ಬರುತ್ತದೆ. ಶಬ್ದ ಬಂದಾಗ ನೀವು ಮತ ಚಲಾಯಿಸಿದ್ದೀರಿ ಎಂದರ್ಥ.
೫. ಇನ್ನು ನೀವು ಯಾರಿಗೆ ಮತ ಹಾಕಿದ್ದೀರೋ ಅವರಿಗೇ ಚಲಾವಣೆಯಾಗಿದೆಯಾ ಎಂದು ಪರಿಶೀಲಿಸಲು ಪಕ್ಕದಲ್ಲೇ ಇರುವ ವಿವಿಪ್ಯಾಟ್‌ ಯಂತ್ರದ ಕಡೆ ನೋಡಬೇಕು. ಅಲ್ಲಿರುವ ಪಾರದರ್ಶಕ ವಿಂಡೋನಲ್ಲಿ ಸ್ಲಿಪ್‌ ಒಂದು ಏಳು ಸೆಕೆಂಡ್‌ವರೆಗೆ ಕಾಣುತ್ತದೆ. ಈ ಸ್ಲಿಪ್‌ನಲ್ಲಿ ನೀವು ಮತ ಚಲಾಯಿಸಿದ ಅಭ್ಯರ್ಥಿ ಸಂಖ್ಯೆ, ಹೆಸರು, ಚಿಹ್ನೆ ಕಾಣಿಸುತ್ತದೆ.
೬. ಇನ್ನು ಸ್ಪರ್ಧೆ ಮಾಡಿರುವ ಯಾವ ಅಭ್ಯರ್ಥಿಯ ಬಗ್ಗೆಯೂ ನಿಮಗೆ ಒಳ್ಳೆಯ ಅಭಿಪ್ರಾಯವಿರದಿದ್ದರೂ ನೀವು ನಿಮ್ಮ ಹಕ್ಕನ್ನು ಚಲಾಯಿಸಬೇಕು. ಆಗ ನಿಮಗೆ ಅಭ್ಯರ್ಥಿ ಬದಲಾಗಿ, ಯಾರೂ ನನಗೆ ಇಷ್ಟವಿಲ್ಲ ಎಂದು ತಿಳಿಸುವ ನೋಟಾ ಬಟನ್‌ ಕೂಡಾ ಅಲ್ಲಿರುತ್ತದೆ. ಇವಿಎಂನಲ್ಲಿ ಕೊನೆಯ ಬಟನ್‌ ನೋಟಾ ಆಗಿರುತ್ತದೆ. ಯಾರೂ ಇಷ್ಟವಿಲ್ಲದಿದ್ದರೆ ನೀವು ನೋಟಾ ಒತ್ತಬಹುದು.
೭. ಇನ್ನು ನೀವು ಮತಗಟ್ಟೆ ಪ್ರವೇಶಿಸುವಾಗ ಯಾವುದೇ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಮೊಬೈಲ್‌, ಕ್ಯಾಮೆರಾ ತೆಗೆದುಕೊಂಡು ಹೋಗಿದ್ದರೆ, ಹೊರಗಡೆ ಇರುವ ಭದ್ರತಾ ಸಿಬ್ಬಂದಿ ಕೈಗೆ ಕೊಟ್ಟು ಹೋಗಬೇಕು. ಮತದಾನ ಮಾಡಿ ಹೊರಬಂದ ನಂತರ ಅವುಗಳನ್ನು ವಾಪಸ್‌ ಪಡೆದುಕೊಳ್ಳಬಹುದು.

Share Post