BengaluruPolitics

Voting; ನಿಮ್ಮ ಆಯ್ಕೆ ಹೇಗಿರಬೇಕು..? ; ಮತ ಹಾಕದಿದ್ದರೆ ಅಪಾಯವೇನು..?

ಬೆಂಗಳೂರು; ನಾಳೆ ಕರ್ನಾಟಕ ವಿಧಾನಸಭೆಯ ಚುನಾವಣೆಯ ಮತದಾನ ನಡೆಯಲಿದೆ. 224 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯವನ್ನು ನಾಳೆ ಮತದಾರ ಬರೆಯಲಿದ್ದಾನೆ. ಇದಕ್ಕಾಗಿ ಈಗಾಗಲೇ ಎಲ್ಲಾ ಸಕಲ ಸಿದ್ಧತೆಗಳೂ ನಡೆದಿವೆ. ಆದ್ರೆ, ಮತದಾನ ಮಾಡುವ ಮೊದಲು ಮತದಾರ ಸ್ವಲ್ಪ ತಾಳ್ಮೆಯಿಂದ ಯೋಚನೆ ಮಾಡುವುದು ಒಳಿತು.

೧. ಎಲ್ಲಾ ಪಕ್ಷಗಳ ಹಣೆ ಬರಹ ನೋಡಿದ್ದೀರಿ. ಎಲ್ಲರೂ ಭ್ರಷ್ಟರೇ ಎಂದು ತೀರ್ಮಾನ ಮಾಡಿ, ಮತದಾನ ಮಾಡದೆ ಸುಮ್ಮನಾಗಬೇಡಿ. ನಿಮ್ಮ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳಲ್ಲಿ ಯಾರು ಪರವಾಗಿಲ್ಲ ಎಂಬುದನ್ನು ತೀರ್ಮಾನಿಸಿ ಮತ ಹಾಕಿ, ಇಲ್ಲದಿದ್ದರೆ ನಿಮ್ಮ ಕ್ಷೇತ್ರದ ಶಾಸಕರನ್ನು ಕುಡುಕರು, ಮತವನ್ನು ಮಾರಿಕೊಂಡವರು ಆಯ್ಕೆ ಮಾಡುತ್ತಾರೆ.

೨. ಪ್ರತಿ ಚುನಾವಣೆಯಲ್ಲೂ ಸುಶಿಕ್ಷಿತರು ಮತದಾನದಿಂದ ದೂರು ಉಳಿಯುತ್ತಾರೆ. ಮತಗಟ್ಟೆ ಬಳಿ ಬರೋದಕ್ಕೂ ಆಸಕ್ತಿ ವಹಿಸೋದಿಲ್ಲ. ಹಾಗೆ ಮಾಡೋದ್ರಿಂದ, ಕೆಟ್ಟ ಅಭ್ಯರ್ಥಿಯನ್ನು ಆಯ್ಕೆ ಮಾಡೋದಕ್ಕೆ ನೀವು ಸಹಕಾರ ಕೊಟ್ಟಂತೆ ಆಗುತ್ತದೆ. ಸುಶಿಕ್ಷಿತರು ಮತಗಟ್ಟೆಗೆ ಬಂದು ಮತಹಾಕಿದಾಗಲೇ ಉತ್ತಮ ಅಭ್ಯರ್ಥಿ ಆಯ್ಕೆಗೆ ಅವಕಾಶವಿರುತ್ತದೆ.

೩. ನಿಮಗೆ ಯಾವ ಅಭ್ಯರ್ಥಿ ಯಾವಾಗಲೂ ಸಿಗುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಚುನಾವಣೆ ಸಮಯದಲ್ಲಿ ಕ್ಷೇತ್ರಕ್ಕೆ ಬರುವವರನ್ನು ತಿರಸ್ಕರಿ. ನಿಮ್ಮ ಜೊತೆಗೇ ಇರುವ ಅಭ್ಯರ್ಥಿಯನ್ನು ಆಯ್ಕೆ ಮಾಡಿ.

೪. ಚುನಾವಣೆಯಲ್ಲಿ ಎಷ್ಟು ಖರ್ಚು ಮಾಡಿದ್ದಾರೆ ಎಂದು ನೋಡಬೇಡಿ. ನಮ್ಮ ಕ್ಷೇತ್ರಕ್ಕೆ ಈ ಅಭ್ಯರ್ಥಿ ಎಷ್ಟು ಅವಶ್ಯಕ ಅನ್ನೋದನ್ನ ಮೊದಲ ನೋಡಿ. ಹಾಗೆ ನೋಡಿ ಅಭ್ಯರ್ಥಿ ಆಯ್ಕೆ ಮಾಡಿದಾಗ ನಮ್ಮ ಕೆಲಸಗಳು ಚೆನ್ನಾಗಿ ಆಗುತ್ತವೆ. ಕ್ಷೇತ್ರದ ಅಭಿವೃದ್ಧಿಯೂ ಆಗುತ್ತದೆ.

೫. ಹಣ ಕೊಟ್ಟಿದ್ದಾರೆ ಅಂತಾನೋ, ನಮ್ಮ ಜಾತಿ ಅಂತಾನೋ, ಬೇರಿನ್ಯಾವುದೋ ಸಿಂಪಥಿಗೋ ಮತ ಹಾಕೋದಕ್ಕೆ ಹೋಗಬೇಡಿ. ಈ ಎಲ್ಲಾ ಕಾರಣಗಳೂ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡೋದಿಲ್ಲ. ಉತ್ತಮ ಅಭ್ಯರ್ಥಿ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬಲ್ಲ.
೬. ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಬರುವ ಅಭ್ಯರ್ಥಿಗೆ ಮತಹಾಕಿ, ಆಗ ಮಾತ್ರ ಸಮಸ್ಯೆಗಳು ಈಡೇರಬಲ್ಲವು. ಭಾವನಾತ್ಮಕ ವಿಚಾರಗಳು ಎಂದಿಗೂ ನಿಮ್ಮ ಕಣ್ಣೊರೆಸೋದಿಲ್ಲ.

೭. ಒಂದು ವೇಳೆ ಎಲ್ಲಾ ಕೋನಗಳಲ್ಲೂ ಪರಿಶೀಲನೆ ಮಾಡಿದ ನಂತರ ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಯಾವ ಅಭ್ಯರ್ಥಿಯೂ ನಿಮಗೆ ಇಷ್ಟವಾಗದಿದ್ದಲ್ಲಿ, ನೋಟಾ ಬಟನ್‌ ಆದರೂ ಒತ್ತಿ ಬನ್ನಿ. ಮತದಾನ ಮಾಡದೇ ಸುಮ್ಮನಿರಬೇಡಿ.

೮. ಕೊನೆಯದಾಗಿ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ಬದಲಾಗಿ, ನಿಮ್ಮ ಸೇವಕನಾಗಿ ಕೆಲಸ ಮಾಡುವ ಅಭ್ಯರ್ಥಿಗೆ ಮತ  ನೀಡಿ.

 

Share Post