ನಮಗೆ ಸೂರ್ಯನ ಕಿರಣಗಳು ಎಷ್ಟು ಅವಶ್ಯಕ..?
ಬೆಳಗಿನ ಸಮಯದಲ್ಲಿ ಸೂರ್ಯನ ಕಿರಣಗಳು ತಾಕಿದರೆ ನಮ್ಮ ಶರೀರದಲ್ಲಿ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಹಾಗಂತ ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಲ್ಲಬಾರದು. ಹೆಚ್ಚು ಹೊತ್ತು ಬಿಸಿಲಿನಲ್ಲಿ ನಿಂತರೆ ಹಲವು ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಹಾಗಾದರೆ, ಎಷ್ಟು ಹೊತ್ತು ಸೂರ್ಯನ ಎದುರು ನಿಲ್ಲಬೇಕು. ಎಷ್ಟು ಸೂರ್ಯನ ಕಿರಣಗಳು ನಮಗೆ ಅವಶ್ಯಕ..?
ಬೆಳಗಿನ ಸಮಯದಲ್ಲಿ ಬಿಸಿಲಿನಲ್ಲಿ ನಿಂತರೆ ನಮ್ಮ ಶರೀರದಲ್ಲಿ ಉತ್ಸಾಹವನ್ನು ತುಂಬೋ ಸೆರೋಟೋನಿನ್ ಎಂಬ ಹಾರ್ಮೋನ್ ಅಧಿಕವಾಗಿ ಉತ್ಪತ್ತಿಯಾಗುತ್ತದೆ ಎಂದು ಒಂದು ಅಧ್ಯಯನ ಹೇಳುತ್ತದೆ. ನಮ್ಮ ದೇಹದಲ್ಲಿರುವ ಮೂಳೆಗಳು ಹಾಗೂ ಇಡೀ ದೇಹಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಾಗಲು ಈ ಸೂರ್ಯನ ಕಿರಣಗಳು ತುಂಬಾನೇ ಅವಶ್ಯಕ.
ಅಧ್ಯಯನಗಳ ಪ್ರಕಾರ ಉತ್ತರ ಭಾರತದ ಶೇಕಡಾ ೬೯ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ ಎದ್ದು ಕಾಣುತ್ತಿದೆ. ಅವರ ದೇಹಕ್ಕೆ ಬೆಳಗಿನ ಸೂರ್ಯನ ಕಿರಣಗಳು ಸರಿಯಾಗಿ ತಾಕದೇ ಇರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಹಾಗಾದರೆ ಚರ್ಮಕ್ಕೆ ಹಾನಿಯಾಗದಂತೆ ಸೂರ್ಯನ ಕಿರಣಗಳಿಂದ ವಿಟಮಿನ್ ಡಿ ಪಡೆಯುವುದು ಹೇಗೆ..? ಎಷ್ಟು ಹೊತ್ತು ಬಿಸಿಲಿನಲ್ಲಿ ಇರಬೇಕು..? ಈ ಪ್ರಶ್ನೆಗಳಿಗೆ ಖಚಿತವಾದ ಉತ್ತರ ಸಿಗುವುದಿಲ್ಲ. ಯಾವ ಕಾಲ, ಯಾವ ದಿನ, ಯಾವ ಸಮಯ ಎಂಬುದರ ಮೇಲೆ ಎಷ್ಟು ಹೊತ್ತು ಸೂರ್ಯನ ಎದುರು ನಿಲ್ಲಬೇಕು ಎಂದು ನಿರ್ಧಾರವಾಗುತ್ತದೆ. ಹಾಗೆಯೇ ನಮ್ಮ ಚರ್ಮ ಯಾವ ರೀತಿಯಲ್ಲಿದೆ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ.
ಒಬ್ಬೊಬ್ಬ ವ್ಯಕ್ತಿಗೂ ಒಂದೊಂದು ರೀತಿಯ ಸೂರ್ಯನ ಕಿರಣಗಳ ಅವಶ್ಯಕತೆ ಇರುತ್ತದೆ. ಬಿಸಿಲಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಕೂಡಾ ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆಯಾಗಿಯೇ ಇರುತ್ತವೆ.
ಚರ್ಮ ತೆಲುವಾಗಿದ್ದರೆ ಬೇಸಿಗೆ ಕಾಲದಲ್ಲಿ ದಿನಕ್ಕೆ ೨೦ ನಿಮಿಷ ಬಿಸಿಲಿನಲ್ಲಿದ್ದರೆ ಸಾಕಾಗುತ್ತದೆ ಎಂದು ಕೆಲವು ವೈದ್ಯರು ಹೇಳುತ್ತಾರೆ. ಕಪ್ಪುಗಿರುವವರಿಗೆ ಅದಕ್ಕಿಂತ ಆರು ಪಟ್ಟು ಸಮಯಬೇಕಾಗುತ್ತದಂತೆ. ಆದರೆ, ಕಪ್ಪು ಚರ್ಮಕ್ಕೆ ಬಿಸಿಲನ್ನು ತಡೆದುಕೊಳ್ಳುವ ಶಕ್ತಿ ಹೆಚ್ಚಾಗಿರುತ್ತದೆ. ಹೀಗಾಗಿ ಕಪ್ಪು ಬಣ್ಣದವರು ಹೆಚ್ಚು ಹೊತ್ತು ಬಿಸಿಲು ತಡೆಯಬಲ್ಲರು.
ಯುವಿ ಕಿರಣಗಳ ಪರಿಣಾಮ
ಸೂರ್ಯನ ನೇರಳಾತೀತ ಕಿರಣಗಳು ಚರ್ಮವನ್ನು ಸ್ಪರ್ಶಿಸಿದರೆ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಬಿಸಿಲು ಹೆಚ್ಚಿರುವಾಗ ನಿಮ್ಮ ನೆರಳನ್ನು ಗಮನಿಸಿ. ನಿಮ್ಮ ನೆರಳು ನಿಮಗಿಂತ ಚಿಕ್ಕದಾಗಿ ಕಂಡುಬಂದರೆ, ಸೂರ್ಯನು ಹೆಚ್ಚು ನೇರಳಾತೀತಿ ಕಿರಣಗಳನ್ನು ಸೂಸುತ್ತಿದ್ದಾನೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ಹೆಚ್ಚುಹೊತ್ತು ಬಿಸಿಲಿನಲ್ಲಿ ನಿಲ್ಲುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಒಂದು ವೇಳೆ ನೇರಳಾತೀತ ಕಿರಣಗಳಿಗೆ ಹೆಚ್ಚು ಹೊತ್ತು ಮೈಒಡ್ಡಿದರೆ ತೂಕ ಹೆಚ್ಚಾಗುವುದು, ರಾತ್ರಿ ವೇಳೆ ಸರಿಯಾಗಿ ನಿದ್ದೆ ಬಾರದಿರುವ ಸಮಸ್ಯೆ ಉಂಟಾಗುತ್ತದೆ. ಅಷ್ಟೇ ಅಲ್ಲ, ಹೃದಯಸಂಬಂಧಿ ಸಮಸ್ಯೆಗಳು, ಮೂಳೆಗಳು ಬಲಹೀನವಾಗುವಂತಹ ತೊಂದರೆಗಳಿಗೂ ಕಾರಣವಾಗಬಹುದು.
ಬಿಸಿಲಿಗೆ ಹೋಗುವುದಕ್ಕೆ ಸಾಧ್ಯವಾಗದವರಿಗೆ ವಿಟಿಮಿನ್ ಟಿ ಕೊರತೆ ಉಂಟಾಗುತ್ತದೆ. ನೈಸರ್ಗಿಕವಾಗಿ ಸಿಗುವ ವಿಟಮಿನ್ ಡಿ ಪಡೆದುಕೊಳ್ಳದಿದ್ದರೆ, ಅವರು ವಿಟಮಿನ್ ಡಿ ಮಾತ್ರೆಗಳ ಮೂಲಕ ಶರೀರಕ್ಕೆ ವಿಟಮಿನ್ ಡಿ ಪೂರೈಕೆ ಮಾಡಿಕೊಳ್ಳಬಹುದು.
ಬಿಸಿಲಲ್ಲಿ ನಿಂತರೆ ಚರ್ಮ ಕ್ಯಾನ್ಸರ್ ಬರುತ್ತದಾ..?
ಅತ್ಯಂತ ಹೆಚ್ಚಾದ ನೇರಳಾತೀತ ಸೂರ್ಯನ ಕಿರಣಗಳು ತಾಕಿದರೆ ಚರ್ಮಕ್ಕೆ ಹಾನಿಯಾಗುತ್ತದೆ. ಆ ಕಿರಣಗಳು ತುಂಬಾನೆ ಜಾಸ್ತಿ ನಮ್ಮ ಶರೀರಕ್ಕೆ ತಗುಲಿದರೆ ಶರ್ಮ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿರುತ್ತದೆ ಎಂದು ಹೇಳುತ್ತಾರೆ ತಜ್ಞರು. ಎರಡು ವರ್ಷಗಳಲ್ಲಿ ಒಮ್ಮೆ ಈ ರೀತಿ ಅತಿನೇರಳಾತೀತ ಕಿರಣಗಳು ತಾಕಿದರೂ, ಹೆಚ್ಚು ಹೊತ್ತು ನೇರಳಾತೀತ ಕಿರಣಗಳಿಗೆ ಮೈಒಡ್ಡಿದರೂ ಚರ್ಮ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಎನ್ನುತ್ತಿದ್ದಾರೆ ತಜ್ಞರು.
ಶೇ.೯೦ರಷ್ಟು ಶರ್ಮ ಕ್ಯಾನ್ಸರ್ ಅಧಿಕ ಸೂರ್ಯನ ಕಿರಣಗಳಿಂದಲೇ ಬರುತ್ತಿದೆಯಂತೆ..! ಹೀಗಾಗಿ, ಚರ್ಮದಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಹಾಗಂತೆ ಚರ್ಮ ಸಮಸ್ಯೆ ಕಾಣಿಸಿಕೊಂಡಿದೆ ಅಂದಾಕ್ಷಣ ಅದು ಚರ್ಮ ಕ್ಯಾನ್ಸರ್ ಆಗಿರಬಹುದು ಎಂದು ಭಯಪಡುವ ಅವಶ್ಯಕತೆ ಇರುವುದಿಲ್ಲ. ಬಹುತೇಕ ಚರ್ಮ ಸಮಸ್ಯೆಗಳು ಕ್ಯಾನ್ಸರ್ ಆಗಿರುವುದಿಲ್ಲ. ಆದರೆ ಚರ್ಮ ಕ್ಯಾನ್ಸರ್ ಬಂದಿರುವ ಶೇಕಡಾ ೯೦ ಮಂದಿಗೆ ಅತಿನೇರಳಾತೀತಿ ಸೂರ್ಯನ ಕಿರಣಗಳಿಂದಲೇ ಕ್ಯಾನ್ಸರ್ ಬಂದಿರುವುದು ಎಂದು ಸಮೀಕ್ಷೆಗಳು ಹೇಳುತ್ತವೆ.
ವಿಟಮಿನ್ ಡಿ ಕೊರತೆಯ ಲಕ್ಷಣಗಳು..
ಬಹುಬೇಗ ಆಯಾಸವಾಗುವುದು, ಕೀಲುನೋವು ಹೆಚ್ಚಾಗುವುದು, ಪಾದಗಳಲ್ಲಿ ಊತ ಕಾಣಿಸಿಕೊಳ್ಳುವುದು., ಹೆಚ್ಚು ಹೊತ್ತು ನಿಲ್ಲುವುದಕ್ಕೆ ಆಗದಿರುವುದು, ಮಾಂಸಖಂಡಗಳು ಬಲಹೀನವಾಗುವುದು ಇಂತಹ ಲಕ್ಷಣಗಳು ಕಂಡುಬಂದರೆ ಅದು ವಿಟಿಮಿನ್ ಡಿ ಕೊರತೆಯಿಂದಲೇ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ.
ಆದರೆ, ಇದನ್ನು ತುಂಬಾ ಜನ ಗಮನಿಸುವುದೇ ಇಲ್ಲ. ಗಮನಿಸಿದರೂ ಅದನ್ನು ಹೆಚ್ಚು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇಂತವರಿಗೆ ಬೇಗ ಶರೀರದ ಎಲ್ಲಾ ಭಾಗಗಳೂ ಬಲಹೀನವಾಗುತ್ತಾ ಬರುತ್ತವೆ. ಇದರಿಂದ ವೃದ್ಧಾಪ್ಯದಲ್ಲಿ ಮೂಳೆಗಳು, ಕೀಲುಗಳು, ಮಾಂಸಖಂಡಗಳು ನೋವು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.