ತಿರುಪತಿಯ ದೇಗುಲ ಮುಚ್ಚುವುದಿಲ್ಲ; ಕಾಮಗಾರಿ ನಡುವೆಯೂ ದರ್ಶವ ವ್ಯವಸ್ಥೆ ಇರುತ್ತೆ..!
ತಿರುಮಲ; ತಿರುಪತಿ ತಿಮ್ಮಪ್ಪನ ದೇಗುಲದ ಗರ್ಭಗುಡಿಯ ವಿಮಾನ ಗೋಪುರಕ್ಕೆ ಚಿನ್ನದ ಲೇಪನ ಮಾಡಬೇಕಿರುವುದರಿಂದ ಗರ್ಭಗುಡಿಯನ್ನು ಎಂಟು ತಿಂಗಳ ಕಾಲ ಮುಚ್ಚಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ ಇದಕ್ಕೆ ದೇಗುಲದ ಅರ್ಚಕರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಅರ್ಚಕ ವೇಣುಗೋಪಾಲ ದೀಕ್ಷಿತುಲು ಮಾತನಾಡಿ, ಚಿನ್ನದ ಲೇಪನ ಕಾರ್ಯ ನಡೆದರೂ ಮೂಲ ವಿರಾಟ್ ಮೂರ್ತಿಯ ದರ್ಶನ ಎಂದಿನಂತೆ ನಡೆಯಲಿದೆ ಎಂದು ಹೇಳಿದ್ದಾರೆ.
ಚಿನ್ನದ ಲೇಪನ ಕಾರ್ಯ ಮಾಡುವುದರಿಂದ ಟಿಟಿಡಿ, ತಿಮ್ಮಪ್ಪ ಮೂಲ ಮೂರ್ತಿಯ ರೂಪದ ಮತ್ತೊಂದು ಮೂರ್ತಿಯನ್ನು ತಯಾರಿಸಿ, ಗುಡಿಯ ಹೊರಾಂಗಣದಲ್ಲಿ ಆ ಮೂರ್ತಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ, ಈಗ ಅರ್ಚಕರು ಇದನ್ನು ನಿರಾಕರಿಸಿದ್ದಾರೆ. 2023ರ ಮಾರ್ಚ್ 1ರಿಂದ ಗೋಪುರದ ಚಿನ್ನದ ಲೇಪನ ಕಾರ್ಯ ಶುರುವಾಗುತ್ತೆ. ಚಿನ್ನದ ಲೇಪನಕ್ಕೆ 6 ತಿಂಗಳು ಸಮಯ ಬೇಕಾಗಲಿದೆ. ಇದಕ್ಕೂ 1 ವಾರ ಮುನ್ನ ದೇಗುಲದ ಪಕ್ಕದಲ್ಲೇ ತಾತ್ಕಾಲಿಕ ಮಂದಿರ ನಿರ್ಮಿಸಿ ಅಲ್ಲಿ ವೆಂಕಟೇಶ್ವರನ ಪ್ರತಿಕೃತಿ ಇರಿಸಲಾಗುತ್ತದೆ. ಈ 6 ತಿಂಗಳೂ ಮೂಲ ಮೂರ್ತಿಯ ದರ್ಶನ ಭಕ್ತರಿಗೆ ಲಭ್ಯವಿರುತ್ತದೆ. ಆದರೆ ಸುಪ್ರಭಾತದಿಂದ ಏಕಾಂತ ಸೇವೆವರೆಗಿನ ಸೇವೆಗಳನ್ನು ಏಕನಾಥಂನಲ್ಲಿ ಮಾಡಲಾಗುತ್ತದೆ ಎಂದಿದ್ದಾರೆ.