CrimeNational

ವಿಜಯನಗರಂ ರೈಲು ದುರಂತ; ಮೃತರ ಸಂಖ್ಯೆ 13ಕ್ಕೆ ಏರಿಕೆ

ವಿಜಯನಗರಂ; ಭಾನುವಾರ ರಾತ್ರಿ ಏಳು ಗಂಟೆ ಸುಮಾರಿಗೆ ಆಂಧ್ರಪ್ರದೇಶದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ವಿಜಯನಗರಂ ಜಿಲ್ಲೆಯ ಕಂಟಕಪಲ್ಲಿ-ಆಲಮಂಡ ನಡುವೆ ನಿಂತಿದ್ದ ಪಲಾಸ ಪ್ಯಾಸೆಂಜರ್‌ಗೆ ಅದೇ ಹಳಿಯಲ್ಲಿ ಬರುತ್ತಿದ್ದ ರಾಯಗಡ ಎಕ್ಸ್‌ಪ್ರೆಸ್ ಢಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದು, ಈ ಪೈಕಿ 11 ಮಂದಿಯನ್ನು ಗುರುತಿಸಲಾಗಿದೆ. ಉಳಿದವರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿಜಯನಗರಂ ಜಿಲ್ಲಾಧಿಕಾರಿ ನಾಗಲಕ್ಷ್ಮಿ ತಿಳಿಸಿದ್ದಾರೆ. ಅಪಘಾತದಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಂಟಕಪಲ್ಲಿ-ಆಳಮಂಡ ಗ್ರಾಮಗಳ ಮಧ್ಯೆ ಬರುವ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಕೂಡಲೇ ಈ ಎರಡು ಗ್ರಾಮಗಳ ಜನರು ಸ್ಥಳಕ್ಕೆ ಆಗಮಿಸಿದರು. ಪೊಲೀಸರು ಹಾಗೂ ರೈಲ್ವೇ ಸಿಬ್ಬಂದಿ ಆಗಮಿಸುವ ಮುನ್ನ ತಾವೇ ಪರಿಹಾರ ಕ್ರಮಗಳನ್ನು ಕೈಗೊಂಡರು.

ಕಂಟಕಪಲ್ಲಿಯಿಂದ ಗದ್ದೆ, ತೋಟಗಳನ್ನು ದಾಟಿ ಸಣ್ಣ ರಸ್ತೆಯಲ್ಲಿ ಒಂದೂವರೆ ಕಿಲೋಮೀಟರ್ ನಡೆದುಕೊಂಡು ಅಪಘಾತ ನಡೆದ ಸ್ಥಳಕ್ಕೆ ತಲುಪಬೇಕು. ಒಂದು ಕಿಲೋಮೀಟರ್ ದೂರದಲ್ಲಿ, ಕೆಂಪು ಮತ್ತು ನೀಲಿ ದೀಪಗಳ ಹತ್ತು ಆಂಬ್ಯುಲೆನ್ಸ್‌ಗಳು ಕಂಡುಬಂದವು. ಅವುಗಳ ನಡುವೆ ಎರಡು ಮೃತ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಂಡುಬಂತು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಈ ವರ್ಷ ಜೂನ್ 2 ರಂದು ದೇಶದ ಅತಿದೊಡ್ಡ ರೈಲು ಅಪಘಾತಗಳಲ್ಲಿ ಒಂದಾದ ಒಡಿಶಾ ಬಾಲಸೋರ್ ರೈಲು ಅಪಘಾತ ನೆನಪಾಯಿತು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

 

Share Post