ಮೈಸೂರಿನಲ್ಲಿ ಗುಂಬಜ್ ರಾಜಕೀಯ; ರಾತ್ರೋರಾತ್ರಿ ಗುಂಬಜ್ ಮೇಲೆ ಬಂತು ಕಳಶ
ಮೈಸೂರು; ಟಿಪ್ಪು ಮೂರ್ತಿ ಸ್ಥಾಪನೆ ವಿವಾದ ಬಿಸಿಯಾಗಿರುವಾಗಲೇ ಈಗ ಮೈಸೂರಿನಲ್ಲಿ ಗುಂಬಜ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗೆ ಸಂಸದ ಪ್ರತಾಪ ಸಿಂಹ ಅವರು ಮಾತನಾಡಿದ್ದು, ಬಸ್ ಶೆಲ್ಟರ್‌ಗಳ ಮೇಲೆ ಗುಂಬಜ್‌ಗಳನ್ನು ನಿರ್ಮಾಣ ಮಾಡಲಾಗಿದೆ ಅದನ್ನು ತೆರವುಗೊಳಿಸಬೇಕು ಎಂದು ಹೇಳಿದ್ದರು. ಈ ಬೆನ್ನಲ್ಲೇ ನಂಜನಗೂಡು ರಸ್ತೆಯಲ್ಲಿರುವ ಬಸ್ ಶೆಲ್ಟರ್‌ನ ಗುಂಬಜ್ ಮೇಲೆ ಕಲಶ ಪ್ರತಿಷ್ಠಾಪನೆ ಮಾಡಿದ್ದಾರೆ. ಶೆಲ್ಟರ್ ಮೇಲೆ ಮೂರು ಗುಂಬಜ್‌ಗಳಿದ್ದು, ಮೂರರ ಮೇಲೂ ಕಳಶ ಮಾದರಿ ಆಕೃತಿಯನ್ನು ರಾತ್ರೋರಾತ್ರಿ ನಿರ್ಮಾಣ ಮಾಡಲಾಗಿದೆ. ಇದು ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ನವೆಂಬರ್ 13ರಂದು ಸಂಸದ ಪ್ರತಾಪ ಸಿಂಹ ಅವರು ರಂಗಾಯಣದಲ್ಲಿ ನಡೆದ ಟಿಪ್ಪು ನಿಜ ಕನಸುಗಳ ನಾಟಕದ ವೇಳೆ ಭಾಷಣ ಮಾಡಿದ್ದರು. ಈ ಭಾಷಣದ ವೇಳೆ ಅವರು ಗುಂಬಜ್ ಮಾದರಿ ಬಸ್ ನಿಲ್ದಾಣ ನಿರ್ಮಿಸಬಾರದು, ನಿರ್ಮಿಸಿರುವ ಶೆಲ್ಟರ್ ಮೇಲೆ ಗುಂಬಜ್ ಇದ್ದರೆ ಅದನ್ನು ಒಡೆದುಹಾಕಲಾಗುವುದು ಎಂದು ಹೇಳಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೀಗ, ನಂಜನಗೂಡು ರಸ್ತೆಯಲ್ಲಿರುವ ಶೆಲ್ಟರ್‌ನ ಗುಂಬಜ್‌ಗಳ ಮೇಲೆ ಕಲಶಗಳು ಬಂದಿವೆ. ಶಾಸಕ ಎಸ್.ಎ.ರಾಮದಾಸ್ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಸ್ ಶೆಲ್ಟರ್ ಬರುತ್ತದೆ.