ಎರಡನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ
ಚೆನ್ನೈ; ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದೆ. ಸಂಸತ್ ಸದಸ್ಯ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರೊಂದಿಗೆ ತಮಿಳುನಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ನಿನ್ನೆ ಕನ್ಯಾಕುಮಾರಿಯಿಂದ ಆರಂಭವಾಗಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯದ ಹಲವು ನಾಯಕರು ಕೂಡಾ ಹೆಜ್ಜೆ ಹಾಕುತ್ತಿದ್ದಾರೆ. ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೆಲ್, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ, ಜೈರಾಂ ರಮೇಶ್ ಸೇರಿದಂತೆ ನೂರಾರು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಜೈರಾಂ ರಮೇಶ್, “ಬಿಜೆಪಿಯ ವಿಭಜನಕಾರಿ ರಾಜಕೀಯದ ವಿರುದ್ಧ ಹೋರಾಡುವುದು, ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಹಾಗು ರಾಜಕೀಯ ಕೇಂದ್ರೀಕರಣಗಳಿಂದ ದೇಶಕ್ಕೆ ಉಂಟಾಗುವ ಅಪಾಯಗಳ ಬಗ್ಗೆ ಜನರನ್ನು ಎಚ್ಚರಿಸುವುದು ಈ ಯಾತ್ರೆಯ ಉದ್ದೇಶ” ಎಂದರು. ಕನ್ಯಾಕುಮಾರಿಯ ಅಗಸ್ತೀಶ್ವರಂನಿಂದ ಯಾತ್ರೆ ಮುಂದೆ ಸಾಗುತ್ತಿದೆ.