ಪ್ರತ್ಯೇಕ ಅಪಘಾತಗಳಲ್ಲಿ ಎರಡು ಬಸ್‌ಗಳು ಪಲ್ಟಿ; 38 ಮಂದಿಗೆ ಗಾಯ
ಚಿಕ್ಕಬಳ್ಳಾಪುರ & ಕಾರವಾರ; ರಾಜ್ಯದಲ್ಲಿ ಎರಡು ಪ್ರತ್ಯೇಕ ಕಡೆ ಅಪಘಾತಗಳು ಸಂಭವಿಸಿದ್ದು, ಎರಡು ಬಸ್‌ಗಳ ಪಲ್ಟಿಯಾಗಿದೆ. ಎರಡೂ ಘಟನೆಗಳಲ್ಲಿ ಒಟ್ಟು 38 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಾರವಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಅವಘಡಗಳು ಸಂಭವಿಸಿವೆ.
ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಕಾರವಾರಕ್ಕೆ ಶೈಕ್ಷಣಿಕ ಪ್ರವಾಸ ಬಂದಿದ್ದ ಬಸ್ ಒಂದು ಉರುಳಿಬಿದ್ದು 18ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಯಗೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರದ ಪ್ರಾರ್ಥನಾ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ 50 ವಿದ್ಯಾರ್ಥಿಗಳು, 8 ಉಪನ್ಯಾಸಕರು ಹಾಗೂ ಇಬ್ಬರು ಆಡಳಿತ ಮಂಡಳಿಯ ಸದಸ್ಯರು ಸೇರಿ ಒಟ್ಟು 60 ಮಂದಿ ಈ ಬಸ್‌ನಲ್ಲಿದ್ದರು.
ಇನ್ನೊಂದೆಡೆ ವೆಳಪಿ ಗ್ರಾಮದಿಂದ ದೊಡ್ಡಬಳ್ಳಾಪುರದ ಲಗುನ ಗಾರ್ಮೆಂಟ್ಸ್ಗೆ ಸಿಬ್ಬಂದಿಯನ್ನು ಕರೆದೊಯ್ಯುತ್ತಿರುವಾಗ ಮೇಳ್ಯಾ ಗ್ರಾಮದಲ್ಲಿ ಬಸ್‌ವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ, 18 ಜನರಿಗೆ ಗಾಯವಾಗಿದೆ. ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು 17 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಗೊಂಡ ಮಹಿಳೆಯನ್ನು ಆಂಧ್ರದ ವೆಳಿಪಿ ಗ್ರಾಮದ ಅಲುವೇಲಮ್ಮ(35) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವಾಗಿ ಒಂದು ಗಂಟೆಯಾದರೂ ಆಂಬ್ಯುಲೆನ್ಸ್ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಹಾಗೂ ತಿರುವಿನಿಂದ ಅಪಘಾತ ಸಂಭವಿಸಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.