Politics

ನೂರಕ್ಕೆ ನೂರು ಪಾಲು ಡಿ.ಕೆ.ಸುರೇಶ್‌ ಗೆಲ್ತಾರೆ; ಸಿಎಂ ಸಿದ್ದರಾಮಯ್ಯ ವಿಶ್ವಾಸ

ರಾಮನಗರ; ಲೋಕಸಭಾ ಚುನಾವಣೆ ರಂಗೇರುತ್ತಿದೆ.. ರಾಜ್ಯದಲ್ಲಿ ನಡೆಯುವ ಮೊದಲ ಹಂತದ ಚುಣಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಶುರುವಾಗಿದೆ.. ಮೊದಲ ದಿನವೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.. ಬೃಹತ್‌ ಮೆರವಣಿಗೆಯ ಮೂಲಕ, ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ..

ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸಿ ಮೆರವಣಿಗೆ;

ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್‌.ಮಂಜುನಾಥ್‌ ಕಣದಲ್ಲಿದ್ದಾರೆ.. ಹೀಗಾಗಿ, ಈ ಕ್ಷೇತ್ರ ಭಾರೀ ಕುತೂಹಲಕ್ಕೆ ಕಾರಣವಾಗಿದೆ.. ಈ ಹಿನ್ನೆಲೆಯಲ್ಲಿ ಡಿ.ಕೆ.ಸುರೇಶ್‌ಗೆ ಈ ಚುನಾವಣೆ ಗೆಲ್ಲೋದು ಒಂದು ಸವಾಲು.. ಒಂದು ಕೆಡೆ ಬಿಜೆಪಿ ಹಾಗೂ ಜೆಡಿಎಸ್‌ ಇಬ್ಬರೂ ಒಂದಾಗಿದ್ದಾರೆ.. ಜೊತೆಗೆ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ತನ್ನದೇ ಆದ ಇಮೇಜ್‌ ಇದೆ.. ಈ ಕಾರಣದಿಂದಾಗಿ ಡಿ.ಕೆ.ಸುರೇಶ್‌ ಮೆಗಾ ಪ್ಲ್ಯಾನ್‌ ರೆಡಿ ಮಾಡಿಕೊಂಡೇ ಅಖಾಡಕ್ಕಿಳಿಯುತ್ತಿದ್ದಾರೆ.. ನಾಮಪತ್ರ ಸಲ್ಲಿಸುವ ಮೊದಲ ದಿನವೇ ಡಿ.ಕೆ.ಸುರೇಶ್‌ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.. ಇದಕ್ಕಾಗಿ ಬೃಹತ್‌ ರೋಡ್‌ ಶೋ ನಡೆಸಿದ್ದಾರೆ.. ರೋಡ್‌ ಶೋಗೆ ಲಕ್ಷಾಂತರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಕೂಡಾ ಮಾಡಿದ್ದಾರೆ.

ಡಿ.ಕೆ.ಸುರೇಶ್‌ ಗೆದ್ದೇ ಗೆಲ್ಲುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ;

ನಾಮಪತ್ರ ಸಲ್ಲಿಕೆ ಹಾಗೂ ರೋಡ್‌ ಶೋನಲ್ಲಿ ಸಿಎಂ ಸಿದ್ದರಾಮಯ್ಯ ಕೂಡಾ ಪಾಲ್ಗೊಂಡಿದ್ದರು.. ಈ ವೇಳೆ ಮಾತನಾಡಿದ ಅವರು ಈ ಬಾರಿ ಡಿ.ಕೆ.ಸುರೇಶ್‌ ಗೆಲ್ಲೋದು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿದ್ದಾರೆ.. ನಾನು ಪ್ರತಿನಿತ್ಯ ಮಾಹಿತಿ ತೆಗೆದುಕೊಳ್ಳುತ್ತಿದ್ದೇನೆ.. ನನಗೆ ಬಂದ ಮಾಹಿತಿ ಆಧಾರದ ಮೇಲೆ ಹೇಳುತ್ತಿದ್ದೇನೆ.. ಈ ಬಾರಿಯೂ ಡಿ.ಕೆ.ಸುರೇಶ್‌ ಗೆಲ್ಲೋದು ಶತಸಿದ್ಧ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಡಿ.ಕೆ.ಸುರೇಶ್ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ.. ರಾಮನಗರ ಜಿಲ್ಲೆಯ ಪ್ರಗತಿಗೆ ನಿರಂತರವಾಗಿ ದುಡಿಯುತ್ತಿದ್ದಾರೆ.‌ ಈ ಕಾರಣಕ್ಕೆ ಕಾಂಗ್ರೆಸ್ ಮತ್ತೆ ಇವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಡಿ.ಕೆ.ಸುರೇಶ್‌ ಅವರನ್ನು ನಿಮ್ಮ ಪ್ರತಿನಿಧಿಯಾಗಿ ಗೆಲ್ಲಿಸಿ ದೆಹಲಿಗೆ ಕಳುಹಿಸಿದರೆ, ಅವರು ನಿನ್ನ ಧ್ವನಿಯಾಗಿ ಕೆಲಸ ಮಾಡುತ್ತಾರೆ.. ನಿಮ್ಮ ಪರವಾಗಿ ಸಂಸತ್ತಿನಲ್ಲಿ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ;

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ದಿನದಿಂದಲೇ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳಲು ಶುರು ಮಾಡಿದೆವು.. ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನೂ ಈಡೇರಿಸಿದ್ದೇವೆ.. ಆದ್ರೆ ಬಿಜೆಪಿಯವರು ಇಂದಿಗೂ ಕೊಟ್ಟ ಮಾತಿನಲ್ಲಿ ಒಂದನ್ನೂ ಈಡೇರಿಕೆ ಮಾಡಿಲ್ಲ ಅಂತ ಸಿದ್ದರಾಮಯ್ಯ ಹೇಳಿದರು.. ಹೀಗಾಗಿ ಬಿಜೆಪಿಗೆ ಮತ ಹಾಕಿದರೆ ಯಾವುದೇ ಪ್ರಯೋಜನವಿಲ್ಲ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ..

ಜನನಾಯಕ ಬೇಕಾ, ಮಂಜುನಾಥ್‌ ಬೇಕಾ..?;

ಡಿ.ಕೆ.ಸುರೇಶ್‌ ಅವರು ಜನರ ನಡುವೆ ನಿಂತು ಕೆಲಸ ಮಾಡುತ್ತಾರೆ.. ಜನ ಪರವಾಗಿ ನಿಲ್ಲುತ್ತಾರೆ.. ಹೀಗಾಗಿ ಜನನಾಯಕ ಬೇಕಾ, ಮಂಜುನಾಥ್‌ ಬೇಕಾ ನೀವೇ ನಿರ್ಧಾರ ಮಾಡಿ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.. ಈಗಾಗಲೇ ಜನ ಡಿ.ಕೆ.ಸುರೇಶ್‌ ಅವರನ್ನು ಗೆಲ್ಲಿಸಲು ತೀರ್ಮಾನಿಸಿ ಆಗಿದೆ.. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾಗ, ಮುಖ್ಯಮಂತ್ರಿ ಆಗಿದ್ದಾಗ ಎಷ್ಟು ಕಡೆಗಣಿಸಿದ್ದರು ಎಂಬುದು ಜನಕ್ಕೆ ಗೊತ್ತಿದೆ ಎಂದೂ ಸಿದ್ದರಾಮಯ್ಯ ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಸಿ.ಸುಧಾಕರ್, ಮಂಕಾಳ ವೈದ್ಯ , ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ , ವಿಧಾನ‌ ಪರಿಷತ್ ಸದಸ್ಯ ಸುದಾಮ ದಾಸ್ ಸೇರಿ ರಾಮನಗರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಜಿಲ್ಲಾ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Share Post