ಹವಾಮಾನ ವೈಪರೀತ್ಯ ಹಿನ್ನೆಲೆ; ಮತ್ತೆ ಸ್ಥಗಿತಗೊಂಡ ಅಮರನಾಥ ಯಾತ್ರೆ
ಶ್ರೀನಗರ; ಕಾಶ್ಮೀರ ಕಣಿವೆಯಲ್ಲಿ ಮತ್ತೆ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ಮತ್ತೆ ಅಮರನಾಥ ಯಾತ್ರೆಗೆ ತೊಂದರೆಯಾಗಿದೆ. 2 ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಪಹಲ್ಗಾಮ್ ಹಾಗೂ ಬಾಲ್ವಾಲ್ ಮಾರ್ಗದಲ್ಲಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಈ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜೊತೆಗೆ ಯಾವುದೇ ಯಾತ್ರಿಕರನ್ನು ಪವಿತ್ರ ಗುಹೆಯೊಳಗೆ ತೆರಳಲು ಅನುಮತಿ ನೀಡುತ್ತಿಲ್ಲ.
ಜುಲೈ 8ರಂದು ಕಾಶ್ಮೀರ ಕಣಿವೆಯಲ್ಲಿ ಭಾರಿ ಮಳೆಯಾಗಿತ್ತು. ಮೇಘಸ್ಫೋಟದ ರೀತಿಯಲ್ಲೇ ಕುಂಭದ್ರೋಣ ಮಳೆ ಸುರಿದಿತ್ತು. ಈ ವೇಳೆ 16 ಯಾತ್ರಿಕರು ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಹೀಗಾಗಿ ಆಗ ಮೂರು ದಿನಗಳ ಅಮರನಾಥ ಯಾತ್ರೆ ಸ್ಥಗಿತಗೊಳಿಸಲಾಗಿತ್ತು. ಅನಂತರ ಸೋಮವಾರ ಪಹಲ್ಗಾಮ್ ಮಾರ್ಗದ ಮೂಲಕ ಮತ್ತು ಮಂಗಳವಾರ ಬಾಲ್ಟಾಲ್ ಮಾರ್ಗದ ಮೂಲಕ ಅಮರನಾಥ ಯಾತ್ರೆಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಮತ್ತೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಮಳೆ ಕಡಿಮೆಯಾದ ಮೇಲೆ ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.