ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ; ಸಿಎಂ ಮನೆ ಮುಂದೆ 1 ಲಕ್ಷ ಮಂದಿ ಧರಣಿ..!
ಬೆಳಗಾವಿ; ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಜೂನ್ 27 ರಂದು ಶಿಗ್ಗಾಂವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಧರಣಿ ನಡೆಸಲಾಗುವುದೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಮೀಸಲಾತಿ ಕೊಡುತ್ತಾರೆ ಎಂಬ ಅತಿಯಾದ ನಂಬಿಕೆ, ವಿಶ್ವಾಸವಿತ್ತು. ಮೀಸಲಾತಿ ಸಂಬಂಧ ಮೂರು ಸಲ ಮಾತು ಕೊಟ್ಟು, ಸಿಎಂ ತಪ್ಪಿದ್ದಾರೆ. ಹೀಗಾಗಿ, ರಾಜ್ಯದ ಪಂಚಮಸಾಲಿ ಸಮಾಜದ 1 ಲಕ್ಷ ಜನರಿಂದ ಸಿಎಂ ನಿವಾಸದ ಎದುರು ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಮೀಸಲಾತಿ ಕೊಡುತ್ತಾರೆ ಎಂದು ಈಗಲೂ ಸಿಎಂ ಬೊಮ್ಮಾಯಿ ಮೇಲೆ ನಂಬಿಕೆ, ವಿಶ್ವಾಸ ಇದೆ. ಇದಕ್ಕಾಗಿ ನಾವು ಆರಂಭಿಕ ಹಂತದಲ್ಲಿ ಸಿಎಂ ನಿವಾಸದ ಎದುರು ಹೋರಾಟ ನಡೆಸುತ್ತೇವೆ. ಬಳಿಕ ಪ್ರತಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡುತ್ತೇವೆ. ಸಿಎಂ ಕೊಟ್ಟ ಭರವಸೆ ಹುಸಿಯಾದ ಕಾರಣಕ್ಕೆ ಪುನಃ ಪ್ರತಿಭಟನೆ ಮಾಡುತ್ತೇವೆ ಎಂದರು.