ಜೆಸಿಬಿ ಕದ್ದು ತಂದರು; ಅದ್ರಿಂದ ಎಟಿಎಂಗೆ ಕನ್ನ ಹಾಕಿದರು..!
ಶಿವಮೊಗ್ಗ; ಜೆಸಿಬಿಯೊಂದನ್ನು ಕದ್ದು ತಂದು ಅದರ ಸಹಾಯದಿಂದ ಎಟಿಎಂಗೆ ಕನ್ನೆ ಹಾಕಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಇಲ್ಲಿನ ವಿನೋಬನಗರ ಬಡಾವಣೆಯಲ್ಲಿನ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಈ ಕೃತ್ಯ ಎಸಗಲಾಗಿದೆ. ಆದ್ರೆ ಅರ್ಧದಲ್ಲಿರುವಾಗಲೇ ಗಸ್ತು ತಿರುಗುವ ಪೊಲೀಸರು ಬಂದಿದ್ದು, ಕಳ್ಳರು ಜೆಸಿಬಿ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಕಳೆದ ರಾತ್ರಿ ಕಳ್ಳರು ಜೆಸಿಬಿಯೊಂದನ್ನು ಕದ್ದುಕೊಂಡು ಬಂದು ಅದರಲ್ಲಿ ಆಕ್ಸಿಕ್ ಬ್ಯಾಂಕ್ ಎಟಿಎಂ ಮಷಿನ್‌ಗೆ ಕನ್ನ ಹಾಕಲು ಪ್ರಯತ್ನಿಸುತ್ತಿದ್ದರು. ಆದ್ರೆ ಇದೇ ರಾತ್ರಿ ಗಸ್ತಿನ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರನ್ನು ನೋಡುತ್ತಲೇ ಕಳ್ಳರು ಅಲ್ಲಿಂದ ಎದ್ನೋ ಬಿದ್ನೋ ಅಂತ ಓಡಿಹೋಗಿದ್ದಾರೆ.
ಪೊಲೀಸರು ಜೆಸಿಬಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜೆಸಿಬಿ ಬೇರೊಬ್ಬರದ್ದೆಂದೂ, ಅದನ್ನು ಕದ್ದು ತರಲಾಗಿತ್ತೆಂದೂ ಗೊತ್ತಾಗಿದೆ. ಈ ಬಗ್ಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.