ಭಜರಂಗದಳ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದರಾ..?
ಮಡಿಕೇರಿ; ಇಲ್ಲಿನ ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ನಡೆದ ಶೌರ್ಯ ಪ್ರಶಿಕ್ಷಣ ವರ್ಗ ತರಬೇತಿಯಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ, ತ್ರಿಶೂಲ ದೀಕ್ಷೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳು ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಹತ್ತು ದಿನಗಳ ಕಾಲ ನಡೆದ ಶಿಬಿರದಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ನ 119 ಶಿಕ್ಷಣಾರ್ಥಿಗಳು ಸೇರಿ 140 ಮಂದಿ ಭಾಗಿಯಾಗಿದ್ದರು. ಶಾಲಾ ಆವರಣದಲ್ಲಿ ಬಂದೂಕು ಹಿಡಿದು ತರಬೇತಿ, ಸಂಸ್ಥೆಯ ಸಭಾಂಗಣ ಮತ್ತು ಆವರಣದಲ್ಲಿ ತ್ರಿಶೂಲ ಹಿಡಿದು ದೀಕ್ಷೆ, ತ್ರಿಶೂಲಕ್ಕೆ ಪೂಜೆ ಹೀಗೆ ಹಲವು ತರಬೇತಿ ನೀಡಲಾಗಿದೆ ಎನ್ನಲಾಗಿದೆ. ಇದನ್ನು ಪುಷ್ಠೀಕರಿಸುವ ಹಲವು ಫೋಟೋಗಳು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಈ ಶಿಬಿರದ ವೇಳೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಶಿಬಿರಕ್ಕೆ ಭೇಟಿ ನೀಡಿದ್ದರು. ಇನ್ನು ಈ ಪ್ರತಿಕ್ರಿಯಿಸಿರುವ ಶಾಲೆ ಮುಖ್ಯಸ್ಥ ಜರು ಗಣಪತಿ, ಶಸ್ತ್ರಾಸ್ತ್ರ ತರಬೇತಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಆಯೋಜಕರೇ ಊಟ, ಮತ್ತಿತರ ವ್ಯವಸ್ಥೆ ಮಾಡಿಕೊಂಡಿದ್ದರು. ಇದರಲ್ಲಿ ನಮ್ಮ ಸಂಸ್ಥೆಯ ಯಾವುದೇ ಪಾತ್ರವಿಲ್ಲ. ರಜೆಯಿದ್ದ ಕಾರಣ ಶಿಕ್ಷಕರೂ ಇರಲಿಲ್ಲ. ಈ ಹಿಂದೆ ರಾಷ್ಟ್ರಮಟ್ಟದ ತರಬೇತಿಯೂ ನಡೆದಿತ್ತು. ಹೊರ ರಾಜ್ಯದಿಂದ ಶಿಕ್ಷಣಾರ್ಥಿಗಳುಬಂದಿದ್ದರು ಎಂದು ಹೇಳಿದ್ದಾರೆ.