ಮೂರೇ ದಿನಕ್ಕೆ ತೇಲುವ ಸೇತುವೆ ಕುಸಿತ; ಪ್ರವಾಸಿಗರಿಗೆ ನಿರಾಸೆ
ಉಡುಪಿ: ರಾಜ್ಯದ ಮೊದಲ ತೇಲುವ ಸೇತುವೆ ಉದ್ಘಾಟನೆಗೊಂಡ ಮೂರೇ ದಿನದಕ್ಕೆ ಕುಸಿದಿದೆ. ಕಡಲ ಅಲೆಗಳ ಅಬ್ಬರಕ್ಕೆ ತೇಲುವ ಸೇತುವೆ ಪೀಸ್ ಪೀಸ್ ಆಗಿದೆ. ಈ ಸುದ್ದಿ ಕೇಳಿ, ಜನರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ನಲವತ್ತು ಪರ್ಸೆಂಟ್ ಕಮೀಷನ್ ಎಫೆಕ್ಟ್ ಎಂದು ಕೆಲವರು ಸರ್ಕಾರವನ್ನು ಲೇವಡಿ ಮಾಡಿದ್ದಾರೆ.
ಉಡುಪಿಯ ಸಮುದ್ರ ತೀರದಲ್ಲಿ ಅಳವಡಿಸಿದ ಈ ತೇಲುವ ಸೇತುವೆ ದೇಶದಾದ್ಯಂತ ಸುದ್ದಿ ಮಾಡಿತ್ತು. ಇದರ ಮೇಲೆ ಓಡಾಡಿ ಖುಷಿಪಡಲು ಪ್ರವಾಸಿಗರು ತುದಿಗಾಲಲ್ಲಿ ನಿಂತಿದ್ದರು. ಆದ್ರೆ ಹವಾಮಾನ ವೈಪರೀತ್ಯ, ಜನರ ಖುಷಿಗೆ ತಣ್ಣೀರೆರೆಚಿದೆ. ಮೇ ಆರರಂದು ಉಡುಪಿಯ ಮಲ್ಪೆ ಬೀಚ್‌ನಲ್ಲಿ ಸ್ಥಳೀಯ ಶಾಸಕ ಕೆ.ರಘುಪತಿ ಭಟ್ ಮತ್ತು ಉಡುಪಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು ಈ ತೇಲುವ ಸೇತುವೆಯನ್ನು ಉದ್ಘಾಟನೆ ಮಾಡಿದ್ದರು.
ರಾಜ್ಯದ ಮೊದಲ ತೇಲುವ ಸೇತುವೆ ಎಂಬ ಹೆಗ್ಗಳಿಕೆ ಈ ಬ್ರಿಡ್ಜ್ ಪಾತ್ರವಾಗಿತ್ತು. ಇನ್ನೂ ವೀಕೆಂಡ್‌ನಲ್ಲಿ ಉದ್ಘಾಟನೆಯಾಗಿದ್ದರಿಂದ, ಇದರ ಮೇಲೆ ಓಡಾಡಲು ಸಾವಿರಾರು ಜನ ಬಂದಿದ್ದರು. ಹೊರ ಜಿಲ್ಲೆಗಳಿಂದಲೂ ಜನರು ಮಲ್ಪೆ ಬೀಚ್‌ಗೆ ಆಗಮಿಸಿದ್ದರು. ಈ ಬ್ರಿಡ್ಜ್ 3.5 ಮೀಟರ್ ಅಗಲ ಮತ್ತು 100 ಮೀಟರ್ ಉದ್ದ ಇತ್ತು. ಈ ತೇಲುವ ಸೇತುವೆಯನ್ನು ಸ್ಥಳೀಯ ಮೂವರು ಉದ್ಯಮಿಗಳು ಸುಮಾರು 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದರು. ಆಗಮಿಸುವ ಪ್ರವಾಸಿಗರಿಗೆ ಲೈಫ್ ಜಾಕೆಟ್, ಲೈಫ್ ಗಾರ್ಡ್‌ಗಳು ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಪ್ರವಾಸಿಗರನ್ನು ಬಿಡಲಾಗಿತ್ತು.